ಹುಣಸೂರು ನಗರದಲ್ಲಿ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್‌ನಿಂದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದ ಆಹ್ವಾನಪತ್ರಿಕೆಯನ್ನು ಗಣ್ಯರು ಬಿಡುಗಡೆಮಾಡಿದರು. ಎಂ.ಕೃಷ್ಣಯ್ಯ, ವೈ.ಕೆ.ಸುಬ್ರಮಣ್ಯ, ರಾಜೇಂದ್ರ, ಸಂಜಯ್ ಇದ್ದರು. 
ಮೈಸೂರು

ರಾಜ್ಯ ಮಟ್ಟದ ವಿಶ್ವ ಆದಿವಾಸಿ ದಿನಾಚರಣೆ 9ಕ್ಕೆ

ರವಿಕುಮಾರ್ ಪಿ. ಕೆ

ಹುಣಸೂರು:

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಮತ್ತು ಆದಿವಾಸಿ ಹರಿಣಶಿಕಾರಿ ಪಾರ‌್ಧಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆ.9ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಪರಿಷತ್‌ನ ಎಂ.ಕೃಷ್ಣಯ್ಯ ತಿಳಿಸಿದರು.

ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಆದಿವಾಸಿ ದಿನಾಚರಣೆ ಮತ್ತು ಆದಿವಾಸಿಗಳ ಕಲಾಮೇಳ ಕಾರ್ಯಕ್ರಮದಲ್ಲಿ ರಾಜ್ಯದ 49 ವಿವಿಧ ಬುಡಕಟ್ಟುಗಳ 30 ಸಾವಿರಕ್ಕೂ ಅಧಿಕ ಆದಿವಾಸಿಗಳು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಹಾಗೂ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಶ್ವಸಂಸ್ಥೆಯು ಆದಿವಾಸಿ ಶುಶ್ರೂಷಕಿ(ದಾದಿ/ಸೂಲಗಿತ್ತಿ ಅವರನ್ನು ಗೌರವಿಸುವುದು, ಜೀವನ ಮತ್ತು ಯೋಗಕ್ಷೇಮ ರಕ್ಷಿಸುವುದು ಎನ್ನುವ ಧ್ಯೇಯವಾಕ್ಯದೊಂದಿಗೆ ಆದಿವಾಸಿ ದಿನಾಚರಣೆ ಆಚರಿಸಲು ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ 25ಕ್ಕೂ ಹೆಚ್ಚು ಆದಿವಾಸಿ ದಾದಿಯರನ್ನು ಗುರುತಿಸಲಾಗಿದೆ. ಮೈಸೂರು ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಸೋಲಿಗ ಸಮುದಾಯದ ದೇವಮ್ಮ, ಯರವ ಸಮುದಾಯದ ಸಣ್ಣಮ್ಮ, ಪೊನ್ನಂಪೇಟೆ ದೇವರಹಾಡಿಯ ಬೆಟ್ಟಕುರುಬ ಸಮುದಾಯದ ಸೋಮಿ, ಆನೆಮಾಳ ಹಾಡಿಯ ಫಣಿಯ ಸಮುದಾಯದ ತಂಗಮ್ಮಅವರನ್ನು ಸನ್ಮಾನಿಸಲಾಗುತ್ತಿದೆ.

ಇದೇ ವೇಳೆ ಹಕ್ಕೊತ್ತಾಯಗಳನ್ನು ಮಂಡಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಆದಿವಾಸಿ ದಿನಾಚರಣೆ ಆಹ್ವಾನಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಪರಿಷತ್‌ನ ಜಂಟಿ ಕಾರ್ಯದರ್ಶಿ ಜಿ.ಸ್ವಾಮಿ, ನಿರ್ದೇಶಕ ಸಂಜಯ್, ಹುಣಸೂರು ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ವೈ.ಕೆ.ಸುಬ್ರಮಣ್ಯ, ಉಪಾಧ್ಯಕ್ಷ ರಾಜೇಂದ್ರ ಇದ್ದರು.