ಬಸವ ಜಯಂತಿ ಆಚರಣೆ ಸಂಬಂಧ ಸೋಮವಾರ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿತ್ತು. ಡಾ.ಪಿ.ಶಿವರಾಜು, ಯುಕೇಶ್ ಕುಮಾರ್, ಶೇಖ್ ತನ್ವೀರ್ ಆಸಿಫ್, ಚಂದ್ರಶೇಖರ್, ಮಲ್ಲಿಕಾರ್ಜುನ ಸ್ವಾಮಿ, ಡಾ. ಸುದರ್ಶನ್ ಇತರರು ಇದ್ದರು.
- ಬಸವ ಜಯಂತಿ ಕಾರ್ಯಕ್ರಮಗಳನ್ನು ವಿನೂತನವಾಗಿ ಯೋಜಿಸಿ
- ಹೊಸತನ ಹಾಗೂ ಹೆಚ್ಚು ಜನರಿಗೆ ಬಸವಣ್ಣನವರ ತತ್ವ, ಆದರ್ಶ ತಲುಪುವ ರೀತಿ ಕಾರ್ಯಕ್ರಮ ರೂಪಿಸಿ
ಮೈಸೂರು:ನಗರದಲ್ಲಿ ಈ ಬಾರಿ ಏ.20ರಂದು ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೂಚನೆ ನೀಡಿದರು.
ಬಸವ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಬಸವ ಜಯಂತಿ ಆಚರಿಸಲಾಗುವುದು. ಅಧಿಕಾರಿಗಳು ಬಸವ ಜಯಂತಿ ಕಾರ್ಯಕ್ರಮಗಳನ್ನು ವಿನೂತನವಾಗಿ ಯೋಜಿಸಿ ಎಂದು ತಿಳಿಸಿದರು.
ಜಿಲ್ಲಾಡಳಿತದಿಂದ ಪುತ್ಥಳಿಗೆ ಮಾಲಾರ್ಪಣೆ, ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಾರಿ ರಾಜ್ಯ ಮಟ್ಟದ ಕಾರ್ಯಕ್ರಮ ಇದಾಗಿದ್ದು, ಹೊಸತನ ಹಾಗೂ ಹೆಚ್ಚು ಜನರಿಗೆ ಬಸವಣ್ಣನವರ ತತ್ವ, ಆದರ್ಶ ತಲುಪುವ ರೀತಿ ಕಾರ್ಯಕ್ರಮ ರೂಪಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಿದರು.
ಯಾವುದೇ ಲೋಪ ಉಂಟಾಗದಂತೆ ಶಿಷ್ಟಾಚಾರದ ಪ್ರಕಾರ ಎಲ್ಲರನ್ನೂ ಆಹ್ವಾನಿಸಿ ಜಯಂತಿಯನ್ನು ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಜಯಂತಿ ಆಚರಣೆಗೆ ಸಂಘ-ಸಂಸ್ಥೆಗಳ ಸಹಯೋಗ ಮುಖ್ಯವಾಗಿದ್ದು, ಬಸವ ಬಳಗದ ಒಕ್ಕೂಟ ಸೇರಿದಂತೆ ವಿವಿಧ ಸಂಸ್ಥೆಗಳು ಸಭೆಯಲ್ಲಿ ನೀಡಿರುವ ಸಲಹೆಗಳ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು. ಸಮಿತಿವಾರು ಸಭೆಗಳನ್ನು ನಡೆಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದರು.
ಬಸವ ಬಳಗ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಒಕ್ಕೂಟದಿಂದ ಬಸವ ಜಯಂತಿ ಅಂಗವಾಗಿ ಏ.19ರಂದು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಲಾಮಂದಿರದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಪ್ರದರ್ಶನ ಹಾಗೂ ಏ.20 ರಂದು ಸಂಜೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದರು.
ಬಸವ ಬಳಗ ಒಕ್ಕೂಟದ ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬಸವ ಜಯಂತಿಯ ದಿನದಂದು ಬಸವಣ್ಣನವರ ಪುತ್ಥಳಿಯ ಶಂಕುಸ್ಥಾಪನೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯತ್ನಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಹೆಚ್ಚುವರಿ ಪೊಲೀಸ್ ಆಯುಕ್ತ ಮಲ್ಲಿಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ. ಸುದರ್ಶನ್, ಬಳಗದ ಮೂಗೂರು ನಂಜುಂಡಸ್ವಾಮಿ, ಜಯಶಂಕರ್, ಶಿವಶಂಕರ್ ಇತರರು ಇದ್ದರು