ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  
ಮೈಸೂರು

ರಾಜ್ಯ ಸರ್ಕಾರ ಬೆಳೆ ಹಾನಿ ವರದಿ ನೀಡಿಲ್ಲ: ಸಂಸದ ಯದುವೀರ್ ಒಡೆಯರ್ ಆರೋಪ

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿಯನ್ನು ಆದ್ಯತಾ ವಲಯವಾಗಿ ಪರಿಗಣಿಸಿದೆ
  • ಆದರೆ ರೈತರನ್ನು ರಕ್ಷಿಸಬೇಕಾದ ಹೊಣೆ ಹೊತ್ತಿರುವ ರಾಜ್ಯ ಸರ್ಕಾರಕ್ಕೆ ಕೃಷಿ ಅಭಿವೃದ್ಧಿಗೆ ಗಮನವನ್ನೇ ಕೊಡುತ್ತಿಲ್ಲ
  • ಸಿದ್ದರಾಮಯ್ಯ ಅವರಿಗೆ ರಾಜಕೀಯವೇ ಮುಖ್ಯವಾಗಿದೆ
ಮೈಸೂರು: ರೈತರ ಕಲ್ಯಾಣಕ್ಕಾಗಿ ಯಾವುದೇ ಕ್ರಮಕೈಗೊಳ್ಳದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿಯನ್ನು ಆದ್ಯತಾ ವಲಯವಾಗಿ ಪರಿಗಣಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಕೃಷಿಗೆ ಪೂರಕ ಯೋಜನೆಗಳನ್ನು ರೂಪಿಸಿದ್ದನ್ನು ಗಮನಿಸಬಹುದು. ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದರೆ ರೈತರನ್ನು ರಕ್ಷಿಸಬೇಕಾದ ಹೊಣೆ ಹೊತ್ತಿರುವ ರಾಜ್ಯ ಸರ್ಕಾರಕ್ಕೆ ಕೃಷಿ ಅಭಿವೃದ್ಧಿಗೆ ಗಮನವನ್ನೇ ಕೊಡುತ್ತಿಲ್ಲ. ಎಲ್ಲದ್ದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುವ ರಾಜಕೀಯ ತಂತ್ರಗಾರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅತಿವೃಷ್ಟಿಯಿಂದಾಗಿ ಏಕದಳ, ದ್ವಿದಳ, ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ನಿಯಮಗಳ ಅನುಸಾರವಾಗಿ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಸರಿಯಾಗಿ ಸಮೀಕ್ಷೆ ನಡೆಸಿ ವರದಿ ಕಳುಹಿಸಿಲ್ಲ. ಜತೆಗೆ ಎಸ್‌ಡಿಆರ್‌ಎಫ್ ಅಡಿಯಲ್ಲಿ ನೀಡಬೇಕಿರುವ ಪರಿಹಾರವನ್ನೂ ರೈತರಿಗೆ ಕೊಟ್ಟಿಲ್ಲ ಎಂದು ಟೀಕಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಹರ್ಷವರ್ಧನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಮುಖಂಡರಾದ ಡಾ.ಅನಿಲ್ ಥಾಮಸ್, ಕಿರಣ್ ಜಯರಾಮೇಗೌಡ, ವೆಂಕಟೇಶ್, ಗಿರಿಧರ್, ಸಂತೋಷ್‌ಕುಮಾರ್ ಇತರರು ಇದ್ದರು.
ರಾಜಕೀಯವೇ ಮುಖ್ಯವಾಗಿದೆ
ಅತಿವೃಷ್ಟಿ, ಅನಾವೃಷ್ಠಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದರೂ ರಾಜ್ಯದ ರೈತರ ಹಿತಕ್ಕಿಂತಲೂ ಸಿದ್ದರಾಮಯ್ಯ ಅವರಿಗೆ ರಾಜಕೀಯವೇ ಮುಖ್ಯವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕಿಸಿದರು. 
ರೈತರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ, ಅದನ್ನು ಮರೆತಿದೆ.  ನೀತಿ ಆಯೋಗದ ಸಭೆಗೆ ರೇವಂತ್‌ರೆಡ್ಡಿ, ಸ್ಟಾಲಿನ್ ಸೇರಿದಂತೆ ನೆರೆ, ಹೊರೆ  ರಾಜ್ಯಗಳ ಮುಖ್ಯಮಂತ್ರಿ ಹೋಗುತ್ತಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಮಾತ್ರ ಗೈರಾಗುತ್ತಾರೆ ಎಂದು ಆರೋಪಿಸಿದರು.
ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ, ಆನೆ ದಾಳಿಯಿಂದಾಗಿ ಅಪಾರ ಪ್ರಮಾಣದ ಸಾವು-ನೋವುಗಳಾದವು. ಆದರೆ ಯಾವುದಕ್ಕೂ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ ಎಂದರು. 
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 293 ಕಿ.ಮೀ. ನಾಗರಹೊಳೆ ಅಭಯಾರಣ್ಯದ ಗಡಿ ಇದೆ. ಈ ಪೈಕಿ ಕುಟ್ಟ, ಹುಣಸೂರು ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ ಮಾಡಲಾಗಿದೆ. ರೈಲ್ವೆ ಬ್ಯಾರಿಕೇಡ್‌ಗೆ ಮೂರು ಕಂಬಿಗಳನ್ನು ಅಳವಡಿಸುವಂತೆ ರೈತರು ಕೇಳುತ್ತಿದ್ದಾರೆ. ಮನವಿಯನ್ನು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ ಎಂದರು.