ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಸಭೆ ಆಯೋಜಿಸಲಾಗಿತ್ತು. ಇಂಗಲಗುಪ್ಪೆ ಕೃಷ್ಣೇಗೌಡ, ಹಳ್ಳಿಕೇರೆಹುಂಡಿ ಭಾಗ್ಯರಾಜ್, ಮೋತಿಲಾಲ್ ಚವ್ಹಾಣ್, ಗಣೇಶ ಇಳಿಗೇರ್, ವಿಠಲ್ ಬಿ.ಗಣಾಚಾರಿ, ಮಹೇಶ್ ಹೊನ್ನೇಗೌಡನಹಳ್ಳಿ, ವಳಗೆರೆ ಗಣೇಶ್, ಎಸ್. ವೀರಭದ್ರಯ್ಯ, ರಾಮೇಗೌಡ ಇತರರು ಇದ್ದರು.
- ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು
- ಪ್ರತಿ ಕಾರ್ಖಾನೆ ಹತ್ತಿರ ಸರ್ಕಾರವೇ ಒಂದು ಲ್ಯಾಬ್ ನಿರ್ಮಿಸಿ ಇಳುವರಿ ಪರೀಕ್ಷೆ ಮಾಡಬೇಕು
- ಕೃಷಿ ಸಾಲವನ್ನು ಮತ್ತು ಟ್ರಾೃಕ್ಟರ್ ಇತರೆ ಕೃಷಿ ಉಪಯೋಗಿ ವಾಹನಗಳ ಸಾಲ ಮನ್ನಾ ಮಾಡಬೇಕು
ಮೈಸೂರು: ರೈತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಡಿಸೆಂಬರ್ 12 ರಂದು ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತಸಂಘಗಳ ಒಕ್ಕೂಟ ತೀರ್ಮಾನಿಸಿದೆ.
ಡಿಸೆಂಬರ್ 23 ರಂದು ಮೈಸೂರಿನಲ್ಲಿ ನಡೆಯುವ ವಿಶ್ವ ರೈತ ದಿನಾಚರಣೆ ಸಂಬಂಧ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ನೇತೃತ್ವದಲ್ಲಿ ಸೋಮವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತಸಂಘಗಳ ಒಕ್ಕೂಟ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ ಆರಂಭಗೊಳ್ಳುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಬೃಹತ್ ರಸ್ತೆತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ನಿರ್ಧರಿಸಲಾಯಿತು.
ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ವ್ಯವಸಾಯದ ಖರ್ಚು ದಿನೇ ದಿನೇ ಹೆಚ್ಚುತ್ತಿದೆ. ರಸಗೊಬ್ಬರ, ಕೂಲಿ, ಇನ್ನಿತರ ಖರ್ಚುಗಳು ಹೆಚ್ಚುತ್ತಿರುವ ಕಾರಣ, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದು ಟನ್ ಕಬ್ಬಿಗೆ ಕನಿಷ್ಠ 3.500 ರೂ, ನೀಡಲೇಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಕಾರ್ಖಾನೆಗಳು ಕಬ್ಬಿನ ಇಳುವರಿ ಪರೀಕ್ಷೆಯಲ್ಲಿ ರೈತರಿಗೆ ಮೋಸ ಮಾಡುತ್ತಿವೆ. ಪ್ರತಿ ಕಾರ್ಖಾನೆ ಹತ್ತಿರ ಸರ್ಕಾರವೇ ಒಂದು ಲ್ಯಾಬ್ ನಿರ್ಮಿಸಿ ಇಳುವರಿ ಪರೀಕ್ಷೆ ಮಾಡಬೇಕು ಅಥವಾ ರೈತರ ಜಮೀನಿನಲ್ಲೇ ಇಳುವರಿ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಕಬ್ಬಿನ ತೂಕದಲ್ಲಿನ ಮೋಸ ತಪ್ಪಿಸಲು ಕಾರ್ಖಾನೆ ಬಳಿ ತೂಕದ ಯಂತ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ತಾಲೂಕು, ಹೋಬಳಿ ಕೇಂದ್ರದಲ್ಲಿ ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಭತ್ತಕ್ಕೆ ಕ್ವಿಂಟಾಲ್‌ಗೆ 3500 ರೂ. ಮತ್ತು ಮೆಕ್ಕೆ ಜೋಳಕ್ಕೆ ಕ್ವಿಂಟಾಲ್‌ಗೆ 3000 ರೂ. ಬೆಂಬಲ ಬೆಲೆ ಘೋಷಿಸಬೇಕು. ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರರ ನೆರವಿಗೆ ಕೇಂದ್ರ ಮತ್ತು ಸರ್ಕಾರ ಧಾವಿಸಬೇಕು ಒತ್ತಾಯಿಸಿದರು.
ರಾಜ್ಯಾದ್ಯಂತ ರೈತರ ಎಲ್ಲ ಕೃಷಿ ಸಾಲವನ್ನು ಮತ್ತು ಟ್ರಾೃಕ್ಟರ್ ಇತರೆ ಕೃಷಿ ಉಪಯೋಗಿ ವಾಹನಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ವಿವಿಧೆಡೆ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮಿತಿ ಮೀರಿದೆ. ಕಾಡುಗಳಲ್ಲಿ ಅಕ್ರಮವಾಗಿ ರೆಸಾರ್ಟ್‌ಗಳನ್ನು ತೆರೆದಿರುವ ಕಾರಣ, ಕಾಡು ಪ್ರಾಣಿಗಳು ನಾಡಿನತ್ತ ಧಾವಿಸಿ ಮನುಷ್ಯರು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ ಎಂದು ದೂರಿದರು.
ಇದುವರೆಗೆ ನೂರಾರು ಅಮಾಯಕ ರೈತರು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಸರ್ಕಾರ, ಅರಣ್ಯ ಇಲಾಖೆ ಕೂಡಲೇ ಕಾಡಿನಲ್ಲಿರುವ ಮತ್ತು ಕಾಡಂಚಿನಲ್ಲಿರುವ ರೆಸಾರ್ಟ್‌ಗಳನ್ನು ತೆರವು ಮಾಡಿಸಿ, ಕಾಡು ಪ್ರಾಣಿಗಳಿಂದ ಜನರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ತೀರ್ಮಾನಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಕರ್ನಾಟಕ ರಾಜ್ಯ ರೈತಸಂಘಟನೆಗಳ ಒಕ್ಕೂಟ ಬೆಳಗಾವಿಯಲ್ಲಿ ಡಿಸೆಂಬರ್12 ರಂದು ಬೃಹತ್ ರಸ್ತೆ ತಡೆ ನಡೆಸುವ ಮೂಲಕ ಅಧಿವೇಶನಕ್ಕೆ ಅಡ್ಡಿ ಪಡಿಸಲಾಗುವುದು. ಅಲ್ಲದೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೇರೆಹುಂಡಿ ಭಾಗ್ಯರಾಜ್, ವಿವಿಧ ರೈತಸಂಘಟನೆಗಳ ಮುಖಂಡರಾದ ಮೋತಿಲಾಲ್ ಚವ್ಹಾಣ್, ಗಣೇಶ ಇಳಿಗೇರ್, ವಿಠಲ್ ಬಿ.ಗಣಾಚಾರಿ, ಮಹೇಶ್ ಹೊನ್ನೇಗೌಡನಹಳ್ಳಿ, ವಳಗೆರೆ ಗಣೇಶ್, ಮಹೇಶ್ ಚರಗಣ್, ಎಸ್. ವೀರಭದ್ರಯ್ಯ, ಕೆಆರ್‌ಎಸ್ ರಾಮೇಗೌಡ, ಯೋಗೇಶ್, ರತ್ನಮ್ಮ ಇತರರು ಇದ್ದರು.