ರಾಜ್ಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್
- 11 ವರ್ಷದ ನಂತರ ನಗರದಲ್ಲಿ ಆಯೋಜನೆ
- ವಿಜೇತರಿಗೆ ಒಂದು ಲಕ್ಷ ರೂ.ಮೊತ್ತದ ವಿವಿಧ ನಗದು ಬಹುಮಾನ
- ರಾಜ್ಯದ 31 ಜಿಲ್ಲೆಗಳಿಂದ 800 ಸ್ಪರ್ಧಿಗಳು, 150 ಜನ ತಾಂತ್ರಿಕ ಅಧಿಕಾರಿಗಳು ಭಾಗಿ
ಮೈಸೂರು: ಅರವತ್ತನೇ ರಾಜ್ಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್-2025ಅನ್ನು 11 ವರ್ಷದ ನಂತರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ, ದೈಹಿಕ ಶಿಕ್ಷಣ ಶಿಕ್ಷಕರ ಅಕಾಡೆಮಿಗಳ ಸಹಯೋಗದಲ್ಲಿ ಡಿ.28ರಂದು ಬೆಳಗ್ಗೆ 6.30ಕ್ಕೆ ನಗರದ ಲಲಿತ ಮಹಲ್ ಹೆಲಿಪ್ಯಾಡ್ ಬಳಿ ಗುಡ್ಡಗಾಡು ಓಟ ನಡೆಯಲಿದ್ದು, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಓಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಮಾಜಿ ನಿರ್ದೇಶಕ ಡಾ. ಕೃಷ್ಣ ತಿಳಿಸಿದರು.
ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಗುಡ್ಡಗಾಡು ಓಟದಲ್ಲಿನ ವಿಜೇತ ಕ್ರೀಡಾಪಟುಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕ ಕೆ.ಹರೀಶ್‌ಗೌಡ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಒಂದು ಲಕ್ಷ ರೂ.ಮೊತ್ತದ ವಿವಿಧ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ 31 ಜಿಲ್ಲೆಗಳಿಂದ 800 ಸ್ಪರ್ಧಿಗಳು, 150 ಜನ ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದು, ಇಲ್ಲಿ ಆಯ್ಕೆಯಾದವರು ಜನವರಿ 24ರಂದು ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುವ 60ನೇ ರಾಷ್ಟ್ರೀಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಬಿ.ಶ್ರೀಕಾಂತ್, ಎಸ್.ಸೋಮಶೇಖರ್, ಎಂ.ಉಮೇಶ್ ಇದ್ದರು.