ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನಿಂದ ಪ್ರತಿಭಟನೆ ನಡೆಯಿತು. ಮಹದೇವಮ್ಮ, ಮಂಜುಳಾ, ವನಜಾ ಇತರರಿದ್ದರು. 
ಮೈಸೂರು

ಗೌರವಧನ ಹೆಚ್ಚಳಕ್ಕೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ನೀಡಿದ್ದ ಸರ್ಕಾರ ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡದೆ ಅನ್ಯಾಯ ಮಾಡಿದೆ
  • ಮೂರು ವರ್ಷ ಕಳೆದರೂ ಗೌರವಧನ ಹೆಚ್ಚಿಸುವ ಭರವಸೆ ಈಡೇರಿಸಿಲ್ಲ
ಮೈಸೂರು:ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳ ಮಾಡದೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ನೀಡಿದ್ದ ಸರ್ಕಾರ ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡದೆ ಅನ್ಯಾಯ ಮಾಡಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವ ಭರವಸೆ ಈಡೇರಿಸಿಲ್ಲ ಎಂದು ದೂರಿದರು.
ಈ ಬಾರಿಗೆ ಬಜೆಟ್‌ನಲ್ಲಿ ಗೌರವಧನ ಹೆಚ್ಚಳವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಹೆಚ್ಚಳ ಮಾಡದೆ ನಿರಾಸೆಯುಂಟು ಮಾಡಲಾಗಿದೆ. ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂ ಹೆಚ್ಚಿಸುವುದಾಗಿ ಘೋಷಿಸಿತ್ತು. ಆದರೆ ಆ ಘೋಷಣೆ ಅನುಷ್ಠಾನಕ್ಕೆ ಬಾರದೆ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳ ತರುವಾಯ ಹಿಂದಿನ ಸಾಲಿನ ಬಜೆಟ್‌ನಲ್ಲಿ ಕೇವಲ 1 ಸಾವಿರ ಗೌರವಧನ ಹೆಚ್ಚಿಸಿ ಘೋಷಣೆ ಮಾಡಿದ್ದಾರೆ ಎಂದು ದೂರಿದರು.
ಆದರೆ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಮಾಸಿಕ 15 ಸಾವಿರ ರೂ.ನೀಡುವ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಅಲ್ಲದೆ 2011ರಿಂದ ಅಂಗನವಾಡಿಗಳಲ್ಲಿ ದುಡಿದು ನಿವೃತ್ತರಾಗಿರುವ ವಯೋವೃದ್ಧ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಯಿಟಿ ಸೌಲಭ್ಯ ಜಾರಿ ಮಾಡದೆ 2023ರ ನಂತರ ನಿವೃತ್ತಿ ಹೊಂದಿದವರಿಗೆ ಅನ್ವಯವಾಗುವಂತೆ ಗ್ರಾಚ್ಯುಯಿಟಿ ಜಾರಿಗೊಳಿಸಲಾಗಿದೆ. ಇದರಿಂದಾಗಿ ಸುಮಾರು 15ರಿಂದ 20 ಸಾವಿರದಷ್ಟು ನಿವೃತ್ತ ಕಾನೂನುಬದ್ಧ ಗ್ರಾಚ್ಯುಯಿಟಿ ವಂಚಿತರಾಗಿದ್ದಾರೆ ಎಂದು ದೂರಿದರು.
ಪ್ರಸಕ್ತ ಬಜೆಟ್‌ನಲ್ಲಿ ಗೌರವಧನ ಹೆಚ್ಚಿಸುವ ಹಾಗೂ 2011ರಿಂದ ನಿವೃತ್ತರಾದ ವಯೋವೃದ್ಧರಿಗೆ ಗ್ರಾಚ್ಯುಯಿಟಿಯನ್ನು ಸರ್ಕಾರ ಘೋಷಿಸಲಿದೆ ಎಂಬ ನಮ್ಮ ನಿರೀಕ್ಷೆಯನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹುಸಿಗೊಳಿಸಿದೆ. ಆದರೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಗೌರವಧನವನ್ನು ಹೆಚ್ಚಳ ಮಾಡದೆ ಸೀರೆಯನ್ನು ನೀಡುವುದಾಗಿ ಘೋಷಿಸುವ ಮೂಲಕ ನಮ್ಮ ದುಡಿಮೆಗೆ ತಕ್ಕ ಪ್ರತಿಫಲ ನೀಡದೆ ಮಹಿಳಾ ಕಾರ್ಮಿಕರಿಗೆ ಕನಿಷ್ಟ ವೇತನದ ನಿರಾಕರಣೆ ಮಾಡಿದಂತಾಗಿದೆ. ಬಜೆಟ್ ಅಂಗೀಕಾರಗೊಳ್ಳುವ ಮೊದಲು ತಿಳಿಸಿದಂತೆ ಸೀರೆ ನೀಡುವ ಬದಲು ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಹದೇವಮ್ಮ, ಮಂಜುಳಾ, ವನಜಾ ಇತರರು ಇದ್ದರು.