ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷಾ ತರಬೇತಿ ಶಿಬಿರವನ್ನು ಕರಾಮುವಿ ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ಉದ್ಘಾಟಿಸಿದರು. ಕೆ.ಎಲ್.ಸೂರಜ್, ಬಸವರಾಜು, ಡಾ.ಸಿದ್ದರಾಜು, ಪ್ರೊ.ಸಿ.ಎಸ್.ಆನಂದ್ ಕುಮಾರ್, ಪ್ರೊ.ರಾಮನಾಥಂ ನಾಯ್ಡು ಇನ್ನಿತರರಿದ್ದರು.
- ವಿದ್ಯಾರ್ಥಿಗಳಿಗೆ ಐಪಿಎಸ್ ಅಧಿಕಾರಿ ಕೆ.ಎಲ್.ಸೂರಜ್ ಸಲಹೆ
- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಶ್ರದ್ಧೆ, ಏಕಾಗ್ರತೆ ಮತ್ತು ಆಸಕ್ತಿ ಮುಖ್ಯ
- ಗುರಿಯ ಬಗ್ಗೆ ಇಂದೇ ನಿರ್ಧರಿಸಿ. ಸಮಯ ನಿಗದಿ ಮಾಡಿಕೊಳ್ಳಿ,
ಪದವಿಯಲ್ಲಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಆರಂಭಿಸಬೇಕು. ಪರೀಕ್ಷಾ ಮಾದರಿ ಅರ್ಥಮಾಡಿಕೊಂಡು ವಿಷಯಗಳನ್ನು ಓದಲು ಶುರು ಮಾಡಿ. ಅದೇ ಯಶಸ್ಸಿಗೆ ಮುಖ್ಯ ಎಂದು 2023ನೇ ಸಾಲಿನ ಐಪಿಎಸ್ ಅಧಿಕಾರಿ ಕೆ.ಎಲ್.ಸೂರಜ್ ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ಯಾವುದನ್ನು ಓದಬೇಕು ಎನ್ನುವ ಬದಲು ಯಾವುದನ್ನು ಓದಬಾರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಶ್ರದ್ಧೆ, ಏಕಾಗ್ರತೆ ಮತ್ತು ಆಸಕ್ತಿ ಮುಖ್ಯವಾಗಿದ್ದು, ಶ್ರಮಪಟ್ಟು ಓದಿದರೆ ಮಾತ್ರ ಯಶಸ್ಸು ಕಾಣಬಹುದು ಎಂದು ಸ್ಪರ್ಧಾರ್ಥಿಗಳಿಗೆ ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮ ಬದುಕನ್ನು ಬದಲಿಸುತ್ತವೆ. ಹೀಗಾಗಿ ನಿಗದಿತ ಸಮಯದಲ್ಲಿ ಕೆಲಸ ಪಡೆದು ಸಾರ್ವಜನಿಕ ಸೇವೆ ಮಾಡಿ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ಕೆಲಸ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಒಂದು ಉತ್ತಮ ಕೆಲಸ ಪಡೆಯಿರಿ. ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಏನೇ ಕೆಲಸ ಸಿಕ್ಕರೂ ಅದನ್ನು ಉತ್ತಮವಾಗಿ ನಿರ್ವಹಿಸಿ. ನೀವು ಏನು ಆಗಬೇಕು, ಏನು ಆಗಬಾರದು ಎಂಬುದನ್ನು ಕಂಡುಕೊಳ್ಳಿ. ಬಳಿಕ ನಿಮ್ಮ ಗುರಿಯ ದಾರಿ ಸ್ಪಷ್ಟವಾಗಲಿದೆ ಎಂದರು.
ನೀವು ಏನೇ ಮಾಡಿದರೂ ಅದನ್ನು ತೀವ್ರವಾಗಿ, ನಿಖರವಾಗಿ ಮಾಡಿ. ಏನು ನೋಡಬೇಕು, ಏನು ನೋಡಬಾರದು ಎಂದು ನೀವೇ ನಿರ್ಧರಿಸಿ. ಕೇಳಿಸಿಕೊಳ್ಳುವುದನ್ನೂ ನಿಖರವಾಗಿ ಕೇಳಿಸಿಕೊಳ್ಳಿ. ಏನೇ ಮಾಡಿದರೂ ಅದರಲ್ಲಿ ಸ್ಪಷ್ಟತೆ ನಿಖರತೆ ಇರಲಿ ಎಂದು ಸಲಹೆ ನೀಡಿದರು.
ನಿಮ್ಮ ಗುರಿಯ ಬಗ್ಗೆ ಇಂದೇ ನಿರ್ಧರಿಸಿ. ಸಮಯ ನಿಗದಿ ಮಾಡಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಓದೇ ನಿಮ್ಮ ಸ್ನೇಹಿತ, ನಿಮಗೆ ಓದಿನ ಹಸಿವಿರಬೇಕು ಎಂದರು.
ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿದ, ಹಿರಿಯ ಕೆಎಎಸ್ ಅಧಿಕಾರಿ ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಸ್ಪರ್ಧಾತ್ಮಕ ಯುಗದಲ್ಲಿ ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಾರೆ. ಆದರೆ, ಆಯ್ಕೆಯಾಗುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಹೀಗಾಗಿ ಶ್ರದ್ಧೆಯಿಂದ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬ ಕನಸನ್ನು ಕಾಣಬೇಕು. ಆ ಕನಸಿಗೆ ಪೂರಕವಾಗಿ ಓದಿನ ಕಡೆ ಗಮನಹರಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತೆ, ಹಣದ ಆಮಿಷ ಒಡ್ಡುತ್ತಾರೆ ಎನ್ನುವ ಊಹಾಪೋಹ ಮನಸ್ಥಿತಿಯಿಂದ ಹೊರ ಬನ್ನಿ. ಕೇವಲ ನಿಮ್ಮ ಗಮನ ಓದಿನ ಕಡೆ ಇರಲಿ ಎಂದರು.
ಇದು ಎಐ ಯುಗ ಎಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತೆ. ಉಪಯೋಗಿಸಿಕೊಂಡು ಓದಿಕೊಳ್ಳಬೇಕು. ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಓದಿ, ಮೌಖಿಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಪರಿಶ್ರಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಪೊಲೀಸ್ ಆಯುಕ್ತ ರವಿ ಪ್ರಸಾದ್ ಮಾತನಾಡಿ, ಯುವಕರು ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಮಾಡುಕೊಳ್ಳುವಲ್ಲಿ ಹಿಂದೆ ಉಳಿದಿದ್ದಾರೆ. ಅದರಲ್ಲೂ ದಕ್ಷಿಣ ಕರ್ನಾಟಕ ಭಾಗದ ಯುವಕರಲ್ಲಿ ಉತ್ಸಾಹ ಕಡಿಮೆ ಆಗಿದೆ. ಉತ್ತರ ಕರ್ನಾಟಕದ ಯುವಕರು ಹೆಚ್ಚು ಸರ್ಕಾರಿ ಕೆಲಸ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಲೆಕ್ಕಪತ್ರ ಇಲಾಖೆಯ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿದ್ದರಾಜು ಮಾತನಾಡಿ, ಶ್ರಮ ಮತ್ತು ಶ್ರದ್ಧೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದರು
ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಬರವಣಿಗೆ ಮುಖ್ಯವಾಗುತ್ತದೆ. ಹೀಗಾಗಿ ಓದುವಾಗ ಬರೆಯುವ ಅಭ್ಯಾಸ ಕರಗತ ಮಾಡಿಕೊಳ್ಳಬೇಕು ಎಂದರು.
ಸಮಾಜ ಮತ್ತು ರಾಷ್ಟ್ರ ಸೇವೆಗೆ ಯುವಕರ ಕೊಡಗೆ ಮುಖ್ಯ. ಯುಪಿಎಸ್‌ಸಿ ಪರೀಕ್ಷೆ ಬರೆಯುವಾಗ ನಿಮ್ಮ ಬರವಣಿಗೆ ಮುಖ್ಯವಾಗುತ್ತದೆ. ಓದುವಾಗ ಟಿಪ್ಪಣಿ ಮಾಡಿಕೊಳ್ಳಿ. ಉತ್ತರ ಹೇಗೆ ಬರೆಯಬೇಕು ಎಂಬುದನ್ನು ಮನನ ಮಾಡಿಕೊಳ್ಳಿ. ಓದುವಾಗ ಬರೆಯುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್.ಆನಂದ್ ಕುಮಾರ್, ಡೀನ್ (ಶೈಕ್ಷಣಿಕ) ಪ್ರೊ. ರಾಮನಾಥಂ ನಾಯ್ಡು , ಡೀನ್ (ಅಧ್ಯಯನ ಕೇಂದ್ರ) ಡಾ.ಆನಂದ ಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋಧ್ಯಮ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶೈಲೇಶ್ ರಾಜೇ ಅರಸ್, ಸಹಾಯಕ ಪ್ರಾಧ್ಯಾಪಕ ಡಾ.ಬೀರಪ್ಪ ಇನ್ನಿತರರಿದ್ದರು.