ಕುವೆಂಪುನಗರದ ಸನ್‌ರೈಸರ್ಸ್‌ ಸ್ಪೋರ್ಟ್ಸ್ ವೇರ್ ಅಂಗಡಿ ಮುಂದೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಂಗಳವಾರ ತ್ಯಾಜ್ಯ ಸುರಿದಿರುವುದು 
ಮೈಸೂರು

ಅಂಗಡಿ ಮುಂದೆ ಕಸ ತಂದು ಸುರಿದ ಶ್ರೀರಾಂಪುರ ಪಟ್ಟಣ ಪಂಚಾಯಿತಿ

ಮೈಸೂರು: ನಗರದ ರಿಂಗ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಿಬ್ಬಂದಿ ವಿನೂತನ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ರಿಂಗ್ ರಸ್ತೆಯಲ್ಲಿ ಸುರಿದಿದ್ದ ಕಸ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆಹಚ್ಚಿ, ಅದೇ ಕಸವನ್ನು ಸಂಬಂಧಿಸಿದ ಅಂಗಡಿ ಮುಂದೆಯೇ ತಂದು ಸುರಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಕುವೆಂಪುನಗರದ ಅಕ್ಷಯ ಭಂಡಾರ್ ಸಮೀಪದ ಸನ್‌ರೈಸರ್ಸ್‌ ಸ್ಪೋರ್ಟ್ಸ್ ವೇರ್ ಅಂಗಡಿ ಮುಂದೆ ತ್ಯಾಜ್ಯ ಸುರಿದು, ಅಂಗಡಿ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಿರುವುದು ಇದೀಗ ಗಮನ ಸೆಳೆದಿದೆ. ರಿಂಗ್ ರಸ್ತೆಯ ಬದಿಯಲ್ಲಿ ಸುರಿದಿದ್ದ ಕಸದ ರಾಶಿಯಲ್ಲಿ ಸನ್‌ರೈಸರ್ಸ್‌ ಸ್ಪೋರ್ಟ್ಸ್ ವೇರ್ ಅಂಗಡಿಗೆ ಸಂಬಂಧಿಸಿದ ಚೀಟಿ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ ಸನ್‌ರೈಸರ್ಸ್‌ ಸ್ಪೋರ್ಟ್ಸ್ ವೇರ್ ಅಂಗಡಿಗೆ ಸೇರಿದ್ದೆಂದು ಖಚಿತಪಡಿಸಿಕೊಂಡ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಕಸವನ್ನು ಸಂಗ್ರಹಿಸಿ ಮತ್ತೆ ಅಂಗಡಿ ಮುಂದೆಯೇ ತಂದು ಸುರಿಸಿದ್ದಾರೆ. ಬಳಿಕ ಅಂಗಡಿ ಮಾಲೀಕರಿಗೆ 5 ಸಾವಿರ ದಂಡ ವಿಧಿಸಿ, ಇನ್ನು ಮುಂದೆ ಈ ರೀತಿ ಕಸ ಸುರಿಸಿದರೆ ಹೆಚ್ಚಿನ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಕಸವನ್ನು ವಾಪಾಸ್ ತೆಗೆದುಕೊಂಡು ಹೋಗಿದ್ದಾರೆ.
ಈ ಕುರಿತು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಸ ಎಸೆದವರನ್ನು ಪತ್ತೆಹಚ್ಚಿ ದಂಡ ವಿಧಿಸುವುದರ ಜತೆಗೆ, ಅವರು ಎಸೆದ ಕಸವನ್ನೇ ಮರಳಿ ಅವರ ಸ್ಥಳಕ್ಕೆ ತಂದು ಹಾಕುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಸನ್‌ರೈಸರ್ಸ್‌ ಸ್ಪೋರ್ಟ್ಸ್ ವೇರ್ ಮಾಲೀಕ ರಾಘವೇಂದ್ರ, ನಮ್ಮ ಅಂಗಡಿ ಇರುವ ಪ್ರದೇಶದಲ್ಲಿ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಪ್ರತಿನಿತ್ಯ ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ರಾತ್ರಿ ಅಂಗಡಿ ಮುಚ್ಚುವ ವೇಳೆ ಕಸವನ್ನು ಅಂಗಡಿ ಮುಂದೆ ಇಟ್ಟು ಹೋಗುತ್ತೇವೆ. ಆದರೆ ಮರುದಿನ ಬೆಳಗ್ಗೆ ಬರುವ ನಗರಪಾಲಿಕೆ ಸಿಬ್ಬಂದಿ ಅದನ್ನು ಕೊಂಡೊಯ್ಯದ ಕಾರಣ ಮೂರುನಾಲ್ಕು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಕಸ ಸಂಗ್ರಹವಾಗುತ್ತದೆ. ಹೆಚ್ಚುವರಿಯಾಗಿ ಸಂಗ್ರಹವಾಗುವ ಕಸವನ್ನು ವ್ಯಕ್ತಿಯೊಬ್ಬರು ಮರುಬಳಕೆ ಮಾಡುವುದಾಗಿ ಹೇಳಿ ಕೊಂಡೊಯ್ಯುತ್ತಿದ್ದರು. ಅವರು ಕೊಂಡೊಯ್ದ ಕಸವನ್ನು ರಿಂಗ್ ರಸ್ತೆಯ ಬದಿಯಲ್ಲಿ ಸುರಿದಿರುವುದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಕಸದೊಂದಿಗೆ ತಮ್ಮ ಅಂಗಡಿಯ ಚೀಟಿ ಸಿಕ್ಕಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಸವನ್ನು ತಮ್ಮ ಅಂಗಡಿಗೆ ಸಂಬಂಧಿಸಿದ್ದೆಂದು ಪತ್ತೆಹಚ್ಚಿ ಮರಳಿ ಅಂಗಡಿ ಮುಂದೆ ಸುರಿಸಿದ್ದಾರೆ. ಅಲ್ಲದೆ 5 ಸಾವಿರ ರೂ.ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಇನ್ನು ಮುಂದೆ ಈ ರೀತಿಯ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೈಸೂರು ಮಹಾನಗರ ಪಾಲಿಕೆ ಪ್ರತಿನಿತ್ಯ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.