ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯಲ್ಲಿರುವ ಬಸವ ಭವನದಲ್ಲಿ ಗುರುವಾರ ಸರಗೂರು ಹೊಸಮಠದಲ್ಲಿ ಆಯೋಜಿಸಿರುವ ಧಾರ್ಮಿಕ ಸಭೆಯ ಬಗ್ಗೆಬಸವರಾಜೇಂದ್ರ ಸ್ವಾಮೀಜಿ ಮಾಹಿತಿ ನೀಡಿದರು. ಕಾರ್ ಮಲ್ಲಪ್ಪ, ಕೆಬ್ಬೆಹುಂಡಿ ಮಾಯಪ್ಪ, ಮಿಲ್ಟ್ರಿ ಸುರೇಶ್ ಇತರರು ಇದ್ದರು.
ತಿ.ನರಸೀಪುರ: ಮಳವಳ್ಳಿ ತಾಲೂಕಿನ ಸರಗೂರು ಗ್ರಾಮದ ಬಳಿಯಿರುವ ಸರಗೂರು ಹೊಸಮಠದಲ್ಲಿ ಮಾ.16 ರಿಂದ 18ರ ವರೆಗೆ ಶ್ರೀಮಲೆ ಮಹದೇಶ್ವರಸ್ವಾಮಿ ನೂತನ ಹುಲಿ ವಾಹನ ಲೋಕಾರ್ಪಣೆ, ಲಿಂಗೈಕ್ಯ ಶ್ರೀ ನಂಜುಂಡಸ್ವಾಮೀಜಿ 16ನೇ ವರ್ಷದ ಸಂಸ್ಮರಣೋತ್ಸವ ಹಾಗೂ ಶ್ರೀ ಕಪ್ಪಡಿ ಕ್ಷೇತ್ರದಿಂದ ಬರುವ ಭಕ್ತಾದಿಗಳಿಗೆ ದಾಸೋಹ ಆಯೋಜಿಸಲಾಗಿದೆ ಎಂದು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೆಳವರಹುಂಡಿಯಲ್ಲಿರುವ ಬಸವ ಭವನದಲ್ಲಿ ಗುರುವಾರ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಪ್ರತಿ ವರ್ಷವೂ ಯುಗಾದಿ ಹಬ್ಬದ ಹಿಂದಿನ ಮೂರು ದಿನಗಳ ಕಾಲ ಕಪ್ಪಡಿ ಶ್ರೀ ರಾಜಪ್ಪಾಜಿ ಸನ್ನಿಧಿಯಿಂದ ಧರೆಗೆ ದೊಡ್ಡವರ ಶ್ರೀ ಕ್ಷೇತ್ರ ಬೊಪ್ಪೇಗೌಡನಪುರಕ್ಕೆ ಸಾವಿರಾರು ಮಂದಿ ಭಕ್ತರು ಬರುತ್ತಾರೆ. ಬರುವ ಎಲ್ಲರಿಗೂ ಸರಗೂರು ಹೊಸಮಠದ ಶ್ರೀ ನಂಜುಂಡಸ್ವಾಮೀಜಿ ಸೇವಾ ಟ್ರಸ್ಟ್ ವತಿಯಿಂದ ದಾಸೋಹ ಸೇವೆ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ ಎಂದರು.
ಮಾ.16ರ ಸೋಮವಾರ ಸಂಜೆ 6 ಗಂಟೆಗೆ ಗೋಧೂಳಿ ಲಗ್ನದಲ್ಲಿ ನೂತನ ಶ್ರೀ ಮಲೆ ಮಹದೇಶ್ವರಸ್ವಾಮಿ ಉತ್ಸವ ಮೂರ್ತಿಯ ಸಂಪ್ರೋಕ್ಷಣ ಕಾರ್ಯಕ್ರಮ, 17ರ ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠೆ ನೇತ್ರೋನಿಲನ, ಅಲಂಕಾರ ಅಷ್ಟೋತ್ತರ, ಮಹಾಮಂಗಳಾರತಿ ದೇವರ ದರ್ಶನ ಜರುಗಲಿದೆ.
ಅಂದೇ ಸಂಜೆ 5 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ, ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಗೌರಿಶಂಕರ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಮಂಡ್ಯ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್. ನಾಗರಾಜು, ಬೆಂಗಳೂರಿನ ವೀರಶೈವ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ.ಆರ್. ಸಿದ್ದಲಿಂಗರಾಧ್ಯ ಬಿಡದಿ, ಉದ್ಯಮಿ ಎಚ್.ಎಸ್. ಶಿವಸ್ವಾಮಿ, ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಶಿಕ್ಷಕಿ ಜ್ಯೋತಿ ಪರಮೇಶ್ ಪಟೇಲ್ ಶ್ರೀ ಮಲೆ ಮಹದೇಶ್ವರ ಸ್ವಾಮಿ ಹಾಗೂ ಸರಗೂರು ಶರಣರ ಹಿನ್ನೆಲೆ ಕುರಿತು ವಿಷಯ ಮಂಡಿಸಲಿದ್ದಾರೆ. ರಾತ್ರಿ 9 ಗಂಟೆಗೆ ದಕ್ಷಯಜ್ಞ ಅಥವಾ ಬೃಹಮುನಿಯ ಗರ್ವಭಂಗ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಬಸವರಾಜೇಂದ್ರ ಸ್ವಾಮೀಜಿ ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಕಾರ್ ಮಲ್ಲಪ್ಪ, ನಿರ್ದೇಶಕ ಕೆಬ್ಬೆಹುಂಡಿ ಮಾಯಪ್ಪ, ಮಿಲ್ಟ್ರಿ ಸುರೇಶ್, ದೊಡ್ಡನಹುಂಡಿ ನಿರಂಜನ್ ಹಾಗೂ ಇತರರು ಇದ್ದರು.