ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿದರಹಳ್ಳಿ ಮತ್ತು ಬೀಚನಹಳ್ಳಿ ವಲಯದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು. 
ಮೈಸೂರು

ಮಹಿಳೆಯರ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಸೌಮ್ಯಾ ಅನಿಲ್ ಚಿಕ್ಕಮಾದು ಅಭಿಪ್ರಾಯ
  • ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಎಚ್.ಡಿ.ಕೋಟೆ: ನಾಡಿನ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಹೇಳಿದರು.
ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿದರಹಳ್ಳಿ ಮತ್ತು ಬೀಚನಹಳ್ಳಿ ವಲಯದ ವತಿಯಿಂದ ಬುಧವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿ ಮಾಡುವ ಕೆಲಸವನ್ನು ಸಂಸ್ಥೆ ಮಾಡಿಕೊಂಡು ಬರುತ್ತಿದೆ. ಮಹಿಳೆಯರು ಕೇವಲ ಮನೆಗಳಲ್ಲಿ ಅಡುಗೆಗೆ ಸೀಮಿತ ಆಗದೆ ಸಂಸ್ಥೆಯ ಯೋಜನೆಯ ಲಾಭವನ್ನು ಪಡೆದುಕೊಂಡು ಮುಂದೆ ಬರಬೇಕು ಎಂದು ತಿಳಿಸಿದರು.
ದೇಶದಲ್ಲಿ ಪ್ರಥಮವಾಗಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಅತಿ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಸಾಲ, ಸೌಲಭ್ಯಗಳನ್ನು ನೀಡುತ್ತಿರುವ ಏಕೈಕ ಸಂಸ್ಥೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಾಗಿದೆ. ಜತೆಗೆ ಮಹಿಳೆಯರು ಬದುಕನ್ನು ಕಟ್ಟಿಕೊಳ್ಳುವುದಕ್ಕೆ, ಸ್ವಯಂ ಉದ್ಯೋಗ ಮಾಡುವುದಕ್ಕೆ, ಹೈನುಗಾರಿಕೆ ಮಾಡಲು, ಕೃಷಿಗೆ ಸಂಬಂಧಿಸಿದಂತೆ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ನೀಡುತ್ತ ಬಂದಿದೆ ಎಂದು ಶ್ಲಾಘಿಸಿದರು.
ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಆರೋಗ್ಯ, ವಿದ್ಯಾಭ್ಯಾಸ ಬಹು ಮುಖ್ಯಪಾತ್ರ ವಹಿಸುತ್ತದೆ. ಬದುಕಿನಲ್ಲಿ ಯುವ ಪೀಳಿಗೆ ಮೊಬೈಲ್ ಗೀಳಿನಿಂದ ಹೊರಬರಬೇಕು, ಮಹಿಳೆಯರು ಕೌಟುಂಬಿಕ ಹಿಂಸೆಯಿಂದ ಹೊರ ಉಳಿದು, ಬದುಕನ್ನು ಸಬಲೀಕರಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಬೀಚನಹಳ್ಳಿ ಸಿದ್ದಮಲ್ಲೇಶ್ವರ ಪಟ್ಟದ ಮಠಾಧ್ಯಕ್ಷ ನಾಗೇಂದ್ರ ಸ್ವಾಮೀಜಿ, ಮನುಷ್ಯನಲ್ಲಿ ತನ್ನಲ್ಲಿರುವ ನಕಾರಾತ್ಮಕ ಗುಣಗಳನ್ನು ತೊಲಗಿಸಲು ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡುವುದು ವಾಡಿಕೆ. ಮನೆಗಳಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಲು ಅಗತ್ಯಕ್ಕಿಂತ ಹೆಚ್ಚು ವ್ಯಯವಾಗುತ್ತದೆ, ಆದರೆ ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಖರ್ಚನ್ನು ಕಡಿಮೆಗೊಳಿಸಬಹುದಾಗಿದೆ ಎಂದರು.
ಯೋಜನೆ ಜಿಲ್ಲಾ ನಿರ್ದೇಶಕ ವಿ. ವಿಜಯಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಆರ್ಥಿಕಾಭಿವೃದ್ಧಿಗೆ ಸಾಲ ನೀಡುವುದು, ಉಳಿತಾಯ ಮಾಡುವುದರ ಜತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡುತ್ತಿದೆ, ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವುದು, ಎಲ್ಲರೂ ಒಂದೇ ಎಂಬ ಸಮಾನತೆಯ ಮನೋಭಾವ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಅಲ್ಲದೆ ಅವರ ಪತಿ ಮದ್ಯಕ್ಕೆ ದಾಸನಾಗಿದ್ದರೆ ಮದ್ಯವರ್ಜನ ಶಿಬಿರದ ಮೂಲಕ ಮದ್ಯ ಬಿಡುಸುವ ಕೆಲಸವನ್ನು ಮಾಡಿದ್ದೇವೆ ಎಂದರು.
ತಾಲೂಕಿನಲ್ಲಿ 2446 ಸ್ವಸಹಾಯ ಸಂಘಗಳಿದ್ದು ಇದುವರೆಗೂ 900 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದಿದ್ದಲ್ಲದೆ ಮರುಪಾವತಿಯನ್ನೂ ಉತ್ತಮವಾಗಿ ನಡೆಸುತ್ತ ಬಂದಿದ್ದು, ಶೇ.99.99ರಷ್ಟು ಮರುಪಾವತಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 80,930 ಕ್ಕೂ ಹೆಚ್ಚು ನಿರ್ಗತಿಕರಿಗೆ ವೇತನವನ್ನು ನೀಡಲಾಗುತ್ತಿದೆ. ಅದೇ ರೀತಿ ಪ್ರತಿ ವರ್ಷ 10000 ಕ್ಕೂ ಹೆಚ್ಚಿನ ಆಹಾರದ ಕಿಟ್‌ಗಳನ್ನು ವಾತ್ಸಲ್ಯ ಕಾರ್ಯಕ್ರಮದಡಿ ವಿತರಿಸಲಾಗಿದೆ. ಮನೆ ಇಲ್ಲದವರಿಗೆ ಸುಮಾರು 1212 ಮನೆಗಳನ್ನು ಕಳೆದ ಮೂರು ವರ್ಷಗಳಿಂದ ನಿರ್ಮಿಸಿ ಹಸ್ತಾಂತರಿಸಿದ್ದು, ಇನ್ನೂ 500 ಮನೆಗಳ ನಿರ್ಮಾಣಕ್ಕೆ ಈ ವರ್ಷ ಚಾಲನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ 510 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಕಿ 1000 ಕೆರೆಗಳ ಹೂಳನ್ನು ತೆಗೆಯಲಾಗಿದೆ. ತಾಲೂಕಿನಲ್ಲೂ 4 ಕೆರೆಗಳಿಗೆ ಹೂಳನ್ನು ತೆಗೆಯಲಾಗಿದ್ದು ಕೆರೆ ಅಭಿವೃದ್ಧಿ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಶಿಕ್ಷಕರ ಕೊರತೆಯನ್ನು ಗಮನಿಸಿದ ವೀರೇಂದ್ರ ಹೆಗ್ಗಡೆ ಅವರು 1070 ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಅವರಿಗೆ ಸಂಬಳದ ರೂಪದಲ್ಲಿ ಮಾಸಿಕ 9 ಸಾವಿರ ರೂ.ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಮಾತನಾಡಿದರು. ಸತ್ಯನಾರಾಯಣ ಪೂಜಾ ವಿಧಿ ವಿಧಾನವನ್ನು ಎಚ್.ಡಿ. ಕೋಟೆಯ ದೀಕ್ಷಿತ್ ಪುರೋಹಿತ್ ನಡೆಸಿಕೊಟ್ಟರು.
ಸೌಮ್ಯಾ ಅನಿಲ್‌ಚಿಕ್ಕಮಾದು, ಯೋಜನಾಧಿಕಾರಿ ಭಾಸ್ಕರ್, ಮೇಲ್ವಿಚಾರಕ ಕೃಷ್ಣಮೂರ್ತಿ, ಮುಖಂಡರಾದ ಮಹೇಶ್, ನಾಗೇಂದ್ರಸ್ವಾಮಿ, ಪುಟ್ಟಸಿದ್ದಯ್ಯ, ಬಿ.ಸಿ.ರಾಜು, ಅಂಕನಾಯಕ, ಸತ್ಯ, ಶಿವಶಂಕರ್, ಸಣ್ಣನಾಯಕ, ಬಿ. ಶಿವಣ್ಣ, ಪೂಜಾ ಸಮಿತಿ ಅಧ್ಯಕ್ಷ ಪ್ರಕಾಶ್, ಮಹೇಶ್, ವಿನೋದ್ ಕುಮಾರ್, ಮಲ್ಲಿಕಾರ್ಜುನ, ಸಣ್ಣಪ್ಪ, ಚಂದ್ರಶೇಖರ್, ಸುಲೋಚನಾ, ಪುಟ್ಟಸಿದ್ದನಾಯಕ, ಉಯ್ಯಂಬಳ್ಳಿ ನಾಗರಾಜು, ನಿಂಗನಾಯಕ, ಕೂಸಯ್ಯ, ಮರಿನಾಯಕ ಇದ್ದರು.