ದೊಡ್ಡಮ್ಮ ಕರಿಯಮ್ಮ ದೇವಸ್ಥಾನದ ಹೊರನೋಟ. 
ಮೈಸೂರು

ಶ್ರೀಕರಿಯಮ್ಮ, ದೊಡ್ಡಮ್ಮನ ಪವಾಡ ಅಪಾರ

ಪ್ರಮುಖ ಮುಖ್ಯಾಂಶಗಳು

  • ಭೇರ್ಯ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆಗಳು
  • ಸುಮಾರು 800 ವರ್ಷಗಳ ಇತಿಹಾಸವಿರುವ ದೇವಸ್ಥಾನ
ಸಾಲಿಗ್ರಾಮ: ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀಕರಿಯಮ್ಮ, ದೊಡ್ಡಮ್ಮ ದೇವಿಯ ಪವಾಡ ಅಪಾರ. ಭಕ್ತಿಯಿಂದ ದೇವಿಯನ್ನು ನಂಬಿದರೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬುದು ಭಕ್ತರ ನಂಬಿಕೆ ಇಂದಿಗೂ ಸತ್ಯವಾಗಿಯೇ ಉಳಿದಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಶಕ್ತಿ ದೇವತೆ ಕರಿಯಮ್ಮ-ದೊಡ್ಡಮ್ಮ ದೇವಿ ದರ್ಶನ ಪಡೆದ ಭಕ್ತರ ಕಷ್ಟ ಕಾರ್ಪಣ್ಯಗಳೆಲ್ಲ ಮಾಯವಾಗುತ್ತವೆ. ಇದರಿಂದಾಗಿ ಮೈಸೂರು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದೆ.
ಭೇರ್ಯ ಗ್ರಾಮದ ಹಾಸನ-ಮೈಸೂರು ಮುಖ್ಯ ರಸ್ತೆಯಲ್ಲಿ ಶ್ರೀಕರಿಯಮ್ಮ, ದೊಡ್ಡಮ್ಮದೇವಿ ಜೋಡಿ ದೇವಸ್ಥಾನಗಳನ್ನು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಜತೆಗೆ ಪಕ್ಕದಲ್ಲೇ ಕನ್ನಂಬಾಡಿ ಅಮ್ಮ ಮತ್ತು ಪಿರಿಯಾಪಟ್ಟಣದ ಅಮ್ಮ ಹಾಗೂ ವಿಘ್ನೇಶ್ವರನ ಚಿಕ್ಕ ದೇವಸ್ಥಾನವನ್ನು ನಿರ್ಮಿಸಿರುವುದು ಭಕ್ತರಿಗೆ ನೆಮ್ಮದಿ ಶಾಂತಿ ಕೇಂದ್ರವಾಗಿದೆ.
ಇಲ್ಲಿಯ ಸಾಂಪ್ರದಾಯಿಕವಾಗಿ ಕರಿಯಮ್ಮನಿಗೆ ಮಂಗಳವಾರ, ದೊಡ್ಡಮ್ಮನಿಗೆ ಶುಕ್ರವಾರ ವಿಶೇಷ ಪೂಜೆ ನಡೆಯುತ್ತವೆ. ಬಂದ ಭಕ್ತಾದಿಗಳೂ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ನೆರವೇರುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಕಷ್ಟದ ಕಾಲದಲ್ಲಿ ಮಾಡಿಕೊಂಡಿದ್ದ ಹರಕೆ ತೀರಿಸಿಕೊಳ್ಳುವುದು ಅಂದಿನ ಕಾಲದಿಂದಲೂ ವಾಡಿಕೆಯಂತೆ ನಡೆದುಕೊಂಡು ಬಂದಿದೆ.
ಶಾಸಕ ಡಿ. ರವಿಶಂಕರ್, ಕೇಂದ್ರ ಸಚಿವ ಎಚ್. ಡಿ . ಕುಮಾರಸ್ವಾಮಿ. ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್. ಮಾಜಿ ಶಾಸಕ ಸಾ. ರಾ. ಮಹೇಶ್. ಮಾಜಿ ಜಿಪಂ ಸದಸ್ಯೆ ಪುಷ್ಪಲತಾ ರಮೇಶ್ ಸೇರಿದಂತೆ ಹಲವು ಜಿಲ್ಲೆ ಮತ್ತು ರಾಜ್ಯಗಳ ರಾಜಕಾರಣಿಗಳು ತಾಯಿಯ ಆಶೀರ್ವಾದ ಪಡೆಯುತ್ತಾರೆ. ಹಾಗಾಗಿ ತಾಯಿಯ ದೃಷ್ಟಿ ಬಿದ್ದಂತಹ ಭಕ್ತರು ತಾವು ಇಟ್ಟ ಗುರಿಯನ್ನು ಸಾಧಿಸುತ್ತಾರೆ. ಸಾಕಷ್ಟು ಉದಾಹರಣೆಗಳು ಕಣ್ಮುಂದೆ ಇವೆ.
ಭೇರ್ಯ ಗ್ರಾಮದ ಸುತ್ತ ಇರುವ ಚಿಕ್ಕಭೇರ್ಯ,ಮುಂಜನಹಳ್ಳಿ, ಕಾವಲು ಹೊಸೂರು, ಸಂಬ್ರವಳ್ಳಿ, ಬಟಿಗನಹಳ್ಳ, ಬೋರೇಗೌಡನಕೊಪ್ಪಲು, ಗೇರದಡ ಸೇರಿದಂತೆ ಒಂಬತ್ತು ಗ್ರಾಮಗಳಿಗೆ ಗ್ರಾಮದೇವತೆಯಾಗಿರುವ ಈ ಅಕ್ಕ ತಂಗಿಯರ ದೇವಸ್ಥಾನ ಅಭಿವೃದ್ಧಿಗೆ ಟ್ರಸ್ಟ್ ನಿರ್ಮಿಸಿಕೊಂಡು ದೇವರ ಮತ್ತು ಭಕ್ತರ ಸೇವೆ ಮಾಡುತ್ತಿದ್ದಾರೆ. ಉತ್ಸವಗಳನ್ನು ಇಲ್ಲಿನ ಜನರು ಸಾಮರಸ್ಯದಿಂದ ಆಚರಿಸುತ್ತಾರೆ.
ದೇವತೆಗಳ ಹಿನ್ನೆಲೆ: ಸುಮಾರು 800 ವರ್ಷಗಳ ಹಿಂದೆ ಗ್ರಾಮದಲ್ಲಿ ಈ ದೇವತೆಗಳು ಕಾಣಿಸಿಕೊಂಡಿದ್ದವೂ. ಕುರಿಗಾಹಿಯೊಬ್ಬರು ಕುರಿ ಕಾಯುವಾಗ ತನ್ನ ಜೋಳಿಗೆ ಒಳಗಡೆ ಇದ್ದಕಿದ್ದಂತೆ ಕಂಡ ಎರಡು ಕಲ್ಲುಗಳನ್ನು ಆತ ಎಸೆದರೆ ಅದು ಮತ್ತೆ ಬಂದು ಅಲ್ಲೇ ಕಾಣಿಸಿ ಕೊಳ್ಳುತ್ತಿತ್ತಂತೆ. ನಂತರ ಆತನು ಅಲ್ಲೆ ಜೋಳಿಗೆಯನ್ನು ಬಿಟ್ಟು ಹೋಗುತ್ತಾನೆ ಎಂದು ಹೇಳಲಾಗುತ್ತದೆ. ನಂತರ ತಮಿಳುನಾಡಿನ ಕುಟುಂಬದವರು ಈ ಮಾರ್ಗವಾಗಿ ಚಲಿಸುತ್ತಿದ್ದಗಾ. ವಿಶ್ರಾಂತಿ ಪಡೆಯಲು ಕುಳಿತುಕೊಂಡರು. ಅವರಿಗೆ ಶ್ರೀಕರಿಯಮ್ಮ, ದೊಡ್ಡಮ್ಮ ದೇವಿಯ ಕಾಣಿಸಿಕೊಂಡು ನಂತರ ಅವರು ದೇವಸ್ಥಾನ ನಿರ್ಮಿಸಿದರು ಎಂದು ಹೇಳಲಾಗುತ್ತದೆ.
ಸಿಡಿ ಜಾತ್ರಾ ಮಹೋತ್ಸವ: ಪ್ರತಿ ವರ್ಷ ಏ. ದೇವಿಯ ಸಿಡಿ ಮತ್ತು ಜಾತ್ರಾ ಮಹೋತ್ಸವ ಲಕ್ಷಾಂತರ ಜನರನ್ನು ಹೊಳಗೊಂಡಂತೆ ಅದ್ದೂರಿಯಾಗಿ ನಡೆಯುತ್ತದೆ. ಅದೇ ರೀತಿ ಈ ವರ್ಷವೂ ಇದೇ ಏಪ್ರಿಲ್ 7 ರಂದು ರಾತ್ರಿ ಸಿಡಿ ಉತ್ಸವ 8ರಂದು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಸಮೀತಿ ತಿಳಿಸಿದೆ. ಬಾಣತಮ್ಮ ಕೆರೆಯ ಹತ್ತಿರದಿಂದ ಸಿಡಿ ಉತ್ಸವ ಮೂರ್ತಿ ಮೆರವಣಿಗೆ ಪ್ರಾರಂಭವಾಗಿ ಹಾಸನ ಮೈಸೂರು ರಾಜ್ಯ ಹೆದ್ದಾರಿ ಮಾರ್ಗವಾಗಿ ಕರಿಯಮ್ಮ ದೊಡ್ಡಮ್ಮ ದೇವಸ್ಥಾನ ಆವರಣಕ್ಕೆ ಲಕ್ಷಾಂತರ ಭಕ್ತರ ಮೂಲಕ ಮೆರವಣಿಗೆ ಸಾಗುತ್ತದೆ.