ತಾಲೂಕಿನ ಕಾಳಿಹುಂಡಿ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಹದಿಮೂರನೇ ವರ್ಷದ ಕೊಂಡೋತ್ಸವ ಕಾರ್ಯಕ್ರಮ ನೆರವೇರಿತು. 
ಮೈಸೂರು

ಶ್ರೀಘನನೀಲಿ ಸಿದ್ದಪ್ಪಾಜಿ ಅದ್ದೂರಿ ಕೊಂಡೋತ್ಸವ

ಪ್ರಜ್ವಲ್.ಎನ್
ನಂಜನಗೂಡು: ತಾಲೂಕಿನ ಕಾಳಿಹುಂಡಿ ಗ್ರಾಮದ ಕುರುಬನಕಟ್ಟೆ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಘನನೀಲಿ ಸಿದ್ದಪ್ಪಾಜಿ ದೇವಾಲಯದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾಳಿಹುಂಡಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಘನನೀಲಿ ಸಿದ್ದಪ್ಪಾಜಿ ದೇವಾಲಯದಲ್ಲಿ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಸೋಮವಾರ ಬೆಳಗಿನ ಜಾವದಲ್ಲಿ ದೇವರಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಫಲಪುಷ್ಪ ಅಭಿಷೇಕ, ಭಂಗಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನ ನಡೆಸಲಾಯಿತು. ಗರ್ಭಗುಡಿಯಲ್ಲಿರುವ ಶ್ರೀ ಮಂಟೆಸ್ವಾಮಿ ಮತ್ತು ಸಿದ್ದಪ್ಪಾಜಿ ದೇವರ ಮೂರ್ತಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ದಪ್ಪಾಜಿಯ ಕಂಡಾಯದ ಮೆರವಣಿಗೆ ಮಾಡಲಾಯಿತು.
ನಂತರ ಹಾಲರವಿ ಉತ್ಸವ ನೆರವೇರಿಯಿತು. ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ಕೊಂಡದಲ್ಲಿ ಶ್ರೀ ಸಿದ್ದಪ್ಪಾಜಿಯ ದೇವರ ಗುಡ್ಡಪ್ಪ ಶಿವಣ್ಣ ಕೊಂಡ ಹಾಯ್ದರು. ನಂತರ ಶ್ರೀ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ದೇವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿದ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಸಿದ್ದಪ್ಪಾಜಿಯ ಕೊಂಡೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಂಜನಗೂಡು ಗ್ರಾಮಾಂತರ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.