ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ಏ.10ರಂದು ಆರಂಭಗೊಳ್ಳಲಿರುವ ಶ್ರೀ ಸಿಡಿಯಮ್ಮ ತಾಯಿ ಜಾತ್ರಾ ಮಹೋತ್ಸವಕ್ಕೆ ಮೂಲಸೌಕರ್ಯ ಕಲ್ಪಿಸಬೇಕೆಂದು ಜ್ರಾ ಸಮಿತಿ ವತಿಯಿಂದ ಗ್ರಾ.ಪಂ.ಆಡಳಿತಾಧಿಕಾರಿ ನಾಗರಾಜುಗೆ ಮನವಿ ಸಲ್ಲಿಸಲಾಯಿತು. ಪಿಡಿಒ ವಿಜಯಕುಮಾರಿ, ಕಾರ್ಯದರ್ಶಿ ಹೇಮಂತ್ ಕುಮಾರ್, ಪಿ.ಪುಟ್ಟರಾಜು, ಆಂಜನೇಯ, ದೇವೇಂದ್ರ ಕುಳುವಾಡಿ, ರಾಜು, ನಾಯಕ ಸಮಾಜದ ಮಹದೇವ, ವಿಠಲ್ ಶೆಟ್ಟಿ ಇದ್ದರು. 
ಮೈಸೂರು

ಇಂದಿನಿಂದ ಶ್ರೀ ಸಿಡಿಯಮ್ಮ ತಾಯಿ ಜಾತ್ರಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಶ್ರೀ ಸಿಡಿಯಮ್ಮ ತಾಯಿ ಜಾತ್ರಾ ಮಹೋತ್ಸವವು ಏ.10ರಿಂದ 21ರವರೆಗೆ ಆಯೋಜಿಸಲಾಗಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.
ಶ್ರೀ ಸಿಡಿಯಮ್ಮ ತಾಯಿ ಗ್ರಾಮದ ಶಕ್ತಿದೇವತೆಯಾಗಿದ್ದು, ನಮ್ಮೂರು ಒಳಗೊಂಡಂತೆ ಪಕ್ಕದ ಹತ್ತಾರು ಗ್ರಾಮಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮದ ಯಜಮಾನರಾದ ಕೃಷ್ಣಶೆಟ್ಟರು ತಿಳಿಸಿದರು.
ಏ.10ರಂದು ಸಿಡಿಮರ ತರುವ ಉತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಏ.17ರಂದು ಸಿಡಿ ಉತ್ಸವವಿದೆ. ಏ.18ರಂದು ರಥಕ್ಕೆ ಕಳಸ ಏರಿಸುವ ಉತ್ಸವ. ಏ.19ರಂದು ಭವ್ಯ ರಥೋತ್ಸವ ಜರುಗಲಿದೆ. ಏ.20ರಂದು ಪಾರಟೋತ್ಸವ, ಏ.21ರಂದು ತೆಪ್ಪೋತ್ಸವ ಆಯೋಜಿಸಲಾಗಿದೆ. ಈ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಸಮಸ್ತ ಬಾಂಧವರು ಬರಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಮೂಲಸೌಕರ್ಯ ಕಲ್ಪಿಸಿ: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ಶ್ರೀ ಸಿಡಿಯಮ್ಮ ತಾಯಿ ಜಾತ್ರಾ ಮಹೋತ್ಸವಕ್ಕೆ ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಜನರಿಗೆ ಪ್ರತಿದಿನ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳನ್ನು ಅಳವಡಿಸುವುದು, ಗ್ರಾಮದ ನಂದಿ ಸರ್ಕಲ್ ಮತ್ತು ಹೈಸ್ಕೂಲ್ ಮುಂಭಾಗ ಸ್ವಾಗತ ಕಮಾನುಗಳಿಗೆ ಹೂವಿನ ಅಲಂಕಾರ, ಜಾತ್ರಾ ಮಹೋತ್ಸವದಲ್ಲಿ ಯಾವುದೇ ವಿದ್ಯುತ್ ಅವಘಡ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ವಾಹನ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಗ್ರಾ.ಪಂ.ಅಧಿಕಾರಿಗಳು ಕ್ರಮವಹಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದರು.