ಸರಗೂರು ತಾಲೂಕು ಗದ್ದೆಹುಂಡಿ ಗ್ರಾಮದ ಕಾಡು ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಮೈಸೂರು

ಮಹದೇಶ್ವರ ಸ್ವಾಮಿ ಕೊಂಡೋತ್ಸವ ಸಂಭ್ರಮ

ಸರಗೂರು: ತಾಲೂಕಿನ ಗದ್ದೆಹುಂಡಿ ಗ್ರಾಮದ ಉದ್ಭವಮೂರ್ತಿ ಕಾಡು ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಕೊಂಡೋತ್ಸವ ಕಣ್ತುಂಬಿಕೊಂಡರು.
ಕೊಂಡೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿವಿಧ ಬಣ್ಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಾನುವಾರ ರಾತ್ರಿ ದೇವಸ್ಥಾನದಲ್ಲಿ ನಾಟಕ ಪ್ರದರ್ಶನ ಮಾಡಲಾಯಿತು. ಜಾತ್ರೆಯಲ್ಲಿ ದೇವರಿಗೆ ಪಂಜಿನ ಸೇವೆ, ಮಹಾಮಂಗಳಾರತಿ ನಡೆಯಿತು. ಬೆಳಗ್ಗಿನಿಂದ ವಿಶೇಷ ಪೂಜೆ, ಹೋಮ-ಹವನ, ರುದ್ರಾಭಿಷೇಕ ನೆರವೇರಿದವು.
ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಮೆರವಣಿಗೆ ಮಾಡಲಾಯಿತು. ವೀರಗಾಸೆ ಕುಣಿತ, ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆ, ಸೂರಿಪಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಉತ್ಸವ ಮೂರ್ತಿಯು ದೇವಸ್ಥಾನದ ಬಳಿಗೆ ಬಂದ ಕೂಡಲೇ ದೇವಸ್ಥಾನ ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಕೆಂಡದ ಮೇಲೆ ನಡೆದು ಹರಕೆ ತೀಸಿದರು.
ಸರಗೂರು ಪೊಲೀಸರು ಸೂಕ್ತ ಬಂದ್ ಬಸ್ತ್ ವ್ಯವಸ್ಥೆ ಮಾಡಿದ್ದರು. ಗುಡ್ಡಪ್ಪ ಜ್ಯೋತಿಪ್ರಕಾಶ್, ಅರ್ಚಕ ಯೋಗೇಶ್, ಗುಡಿಗೌಡ ಮಹೇಶ್, ಮುಖಂಡರಾದ ಗುಂಡುಪಾಲ್, ನಾಗಪ್ಪ, ಕಾಳ ಸ್ವಾಮಪ್ಪ, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಹಾಜರಿದ್ದರು.