ಸರಗೂರು ತಾಲೂಕಿನ ಕಂದೇಗಾಲ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸರಗೂರು: ತಾಲೂಕಿನ ಕಂದೇಗಾಲ ಗ್ರಾಮದ ಶ್ರೀಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಕೊಂಡೋತ್ಸವ ಕಣ್ತುಂಬಿಕೊಂಡರು.
ಕೊಂಡೋತ್ಸವ ಅಂಗವಾಗಿ ದೇವರಿಗೆ ಪಂಜಿನ ಸೇವೆ, ಮಹಾಮಂಗಳಾರತಿ ನಡೆಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಹಂಚೀಪುರ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಾಕ್ಷರಿ ಸ್ವಾಮೀಜಿ, ಪಡುವಲು ವಿರಕ್ತ ಮಠದ ಮಹದೇವ ಸ್ವಾಮೀಜಿ, ಪುರಮಠದ ನಾಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಂದೇಗಾಲ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ದೇವಾಲಯ ಮತ್ತು ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗಿನ ಜಾವದಿಂದಲೇ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನ, ರುದ್ರಾಭಿಷೇಕ ನೆರವೇರಿಸಲಾಯಿತು. ಜಾತ್ರಾ ಮಹೋತ್ಸವ ಅಂಗವಾಗಿ ನದಿಗೆ ತೆರಳಿ ಗಂಗೆಪೂಜೆ ನಡೆಸಿ ದೇವರ ಉತ್ಸವಮೂರ್ತಿಯನ್ನು ವಿವಿಧ ಹೂವಿನಿಂದ ಅಲಂಕರಿಸಿ ಮೆವರಣಿಗೆ ಮಾಡಲಾಯಿತು. ಭಕ್ತರು ದಾರಿಯುದ್ದಕ್ಕೂ ಮಲೇಮಹದೇಶ್ವರನಿಗೆ ಜೈಕಾರ ಹಾಕಿದರು. ವೀರಗಾಸೆ ಕುಣಿತ, ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆ ಸೂರಿಪಾನಿಗಳೊಂದಿಗೆ ಮೆರವಣಿಗೆ ದೇವಸ್ಥಾನಕ್ಕೆ ಬಂದ ಕೂಡಲೇ ದೇವಸ್ಥಾನ ಸುತ್ತು ಪ್ರರ್ದಕ್ಷಿಣೆ ಹಾಕಲಾಯಿತು. ನಂತರ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ನೂರಾರು ಭಕ್ತರು ಕೊಂಡ ಹಾಯ್ದು
ಕಂದೇಗಾಲ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಸರತಿಯಲ್ಲಿ ಸಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸರಗೂರು ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗೆ ಅನ್ನ ಸಂರ್ತಪಣೆ ಮಾಡಲಾಯಿತು.
ಜಿಪಂ ಮಾಜಿ ಸದಸ್ಯರಾದ ಕೆ.ಚಿಕ್ಕವೀರ ನಾಯಕ, ರೂಪಾ ಲೋಕೇಶ್, ಮಾಜಿ ಶಾಸಕ ಎಂ.ಪಿ.ವೆಂಕಟೇಶ್ ಅವರ ಪುತ್ರ ಎಂ.ಪಿ.ಶಂಕರ್, ಎಂ.ಎಸ್.ಚರಣ್ ಮುಖಂಡರಾದ ಪಟೇಲ್ ರಾಜಪ್ಪ, ಸೋಮಣ್ಣ, ರವೀಶ್, ಕೆ.ವಿ.ರುದ್ರಯ್ಯ, ಮಾದಪ್ಪ, ಮಲ್ಲೇಶ್, ಶ್ರೀಕಂಠಸ್ವಾಮಿ, ಬಸವರಾಜು, ಚಲುವಯ್ಯ, ಲಕ್ಷ್ಮಣ್, ರವಿ ಆರಸ್, ಕಾಳಸ್ವಾಮಿ, ಮಹೇಶ್ ಇತರರು ಇದ್ದರು.
ಸಾಮೂಹಿಕ ವಿವಾಹ: ಜಾತ್ರಾ ಮಹೋತ್ಸವ ಅಂಗವಾಗಿ ಫೆ.4ರಂದು ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಬುಧವಾರವೂ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಂದೇಗಾಲ ಮಹದೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಸೋಮಣ್ಣ ಮಾಹಿತಿ ನೀಡಿದ್ದಾರೆ.