ಪಿರಿಯಾಪಟ್ಟಣದಲ್ಲಿ ಮಾಚಿದೇವ ಮಡಿವಾಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಕೆ.ವೆಂಕಟೇಶ್, ಡಾ.ಬಸವ ಮಾಚಿದೇವ ಸ್ವಾಮೀಜಿ, ನಿತೀನ್ ವೆಂಕಟೇಶ್, ಪುಟ್ಟ ಮಾದಯ್ಯ, ಮಾದೇಶ್ ಇದ್ದರು.
ಪಿರಿಯಾಪಟ್ಟಣ: ಮಡಿವಾಳ ಮಾಚಿದೇವರ ತತ್ವ, ಆದರ್ಶಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಮಾಚಿದೇವ ಮಡಿವಾಳ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದೇನೆ. ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ಹಂತದಲ್ಲಿ ನೀವು ನೀಡಿರುವ ಮನವಿಯನ್ನು ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
ಮಡಿವಾಳ ಸಮಾಜದ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಮಡಿವಾಳ ಮಾಚಿದೇವರು ಬಸವಣ್ಣನವರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ವಚನಗಳ ಉಳಿವಿಗೆ ಸಾಕ್ಷಿಭೂತರಾಗಿದ್ದಾರೆ. ಮಾಚಿದೇವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸುವುದರ ಮೂಲಕ ಸಾಮಾಜಿಕ ಸದೃಢತೆಗೆ ಶ್ರಮಿಸಬೇಕು. ಸಮುದಾಯದ ಜನರು ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.
ಸಾಹಿತಿ ಪುಟ್ಟ ಮಾದಯ್ಯ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದಾರೆ. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ, ಲಿಂಗತಾರತಮ್ಯ ಸೇರಿದಂತೆ ಇನ್ನಿತರ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದ ಮಹನೀಯರಾಗಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಮಾದೇಶ್, ಮುಖಂಡರಾದ ಸತೀಶ್, ಹರಿಹರ ಆನಂದಸ್ವಾಮಿ, ರವಿ ನಂದನ್, ನಾಗೇಶ್, ಬೋರಶೆಟ್ಟಿ, ಪಿಡಿಒ ವೀರಭದ್ರ ಶೆಟ್ಟಿ, ಸಿದ್ದನಕೊಪ್ಪಲು ಕುಮಾರ್, ರವಿ, ಹರ್ಷವರ್ಧನ್, ಟಿ.ಈರಯ್ಯ, ರಾಮಚಂದ್ರ, ವಿಜಯ್ ಕುಮಾರ್, ಪ್ರದೀಪ್ ಇತರರಿದ್ದರು.