ನಗರದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀದತ್ತವಿಜಯಾನಂದ ತೀರ್ಥ ಸ್ವಾಮೀಜಿ, ವಿಶ್ವಶಾಂತಿಗಾಗಿ 23ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವವನ್ನು ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದರು. 
ಮೈಸೂರು

ಚಾತುರ್ಮಾಸ್ಯ ವ್ರತ ಆರಂಭಿಸಿದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ

ಪ್ರಮುಖ ಮುಖ್ಯಾಂಶಗಳು

  • ಲೋಕ ಕಲ್ಯಾಣ ಹಾಗೂ ವಿಶ್ಚ ಶಾಂತಿಗಾಗಿ ಪ್ರಾರ್ಥಿಸಿ ಚಾತುರ್ಮಾಸ್ಯ ವ್ರತ
  • ನಮಗೆ ಜ್ಞಾನ ನೀಡಿದ ಎಲ್ಲ ಗುರುಗಳನ್ನು ಪ್ರತಿಕ್ಷಣ ನೆನಪಿಸಿಕೊಳ್ಳಬೇಕು

ಮೈಸೂರು:

ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಸ್ವಾಮಿಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ವಿಶ್ವಶಾಂತಿಗಾಗಿ 23ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವವನ್ನು ವ್ಯಾಸ ಗುರುಪೂರ್ಣಿಮೆ ದಿನವಾದ ಬುಧವಾರದಿಂದ ಆರಂಭಿಸಿದರು.

ಗುರು ದತ್ತಾತ್ರೇಯಸ್ವಾಮಿ ಹಾಗೂ ವ್ಯಾಸರು, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ, ಗುರುಗಳ ಮಾತೃಶ್ರೀ ಮತ್ತು ಶಂಕರಾಚಾರ್ಯರಿಗೆ ಅರ್ಚನೆ, ಮಹಾಪೂಜೆ, ಮಂಗಳಾರತಿ ನೆರವೇರಿಸಿದರು.
ಗುರುಪೂರ್ಣಿಮೆ ಅಂಗವಾಗಿ ಗುರುಪರಂಪರಾ ಪೂಜೆ, ವ್ಯಾಸಪೂಜೆ, ಪೂಜ್ಯ ಸ್ವಾಮೀಜಿ ಅವರ ಪಾದುಕಾ ಪೂಜೆ, ಪವಮಾನ ಹೋಮ ಹಾಗೂ ದತ್ತ ಹೋಮವನ್ನು ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ನೂರಾರು ಭಕ್ತರ ಸಮ್ಮುಖದಲ್ಲಿ ನಡೆಸಿಕೊಟ್ಟು, ಲೋಕ ಕಲ್ಯಾಣ ಹಾಗೂ ವಿಶ್ಚ ಶಾಂತಿಗಾಗಿ ಪ್ರಾರ್ಥಿಸಿ ಚಾತುರ್ಮಾಸ್ಯ ವ್ರತ ಪ್ರಾರಂಭಿಸಿರುವುದಾಗಿ ತಿಳಿಸಿದರು.
ಮಹಾಜ್ಞಾನಿ ಎಂದು ಮನುಷ್ಯರು ಮೆರೆಯುತ್ತಾನೆ. ಆದರೆ ಆತ್ಮಜ್ಞಾನವೇ ಮುಖ್ಯ, ಆತ್ಮಜ್ಞಾನ ಬೋಧಿಸುವ ಗುರುವಿಗಿಂತ ಬೇರೊಬ್ಬ ಈ ಸೃಷ್ಟಿಯಲ್ಲಿ ಇಲ್ಲ. ಹಾಗಾಗಿ ನೀವು ಹೇಳಿದ ಹಾಗೆ ಮಾಡುತ್ತೇನೆ ಎಂದು ಶ್ರೀರಾಮನು ಗುರು ವಶಿಷ್ಠರಿಗೆ ಹೇಳಿದ್ದರು ಎಂದು ಗುರುಪೂರ್ಣಿಮೆಯ ಮಹತ್ವವನ್ನು ಶ್ರೀಗಳು ಸಣ್ಣ ಕಥೆಯೊಂದಿಗೆ ತಿಳಿಸಿದರು.
ಎಲ್ಲರೂ ಗುರುಸೇವೆ ಮಾಡಿ, ಗುರು ವಾಕ್ಯಪಾಲನೆ ಮಾಡುತ್ತಾ ಗುರು ವಾಕ್ಯದಂತೆ ನಡೆಯಬೇಕು. ನಮಗೆ ಜ್ಞಾನ ನೀಡಿದ ಎಲ್ಲ ಗುರುಗಳನ್ನು ಪ್ರತಿಕ್ಷಣ ನೆನಪಿಸಿಕೊಳ್ಳಬೇಕು. ನಮಗೆ ಜ್ಞಾನಾರ್ಜನೆ ಮಾಡಿದ ಎಲ್ಲ ಗುರುಗಳಿಗೆ ನಮಿಸಿ ಸ್ಮರಿಸುವುದೇ ಗುರು ಪೂರ್ಣಿಮೆ. ಗುರು ಪರಂಪರಾ ಸ್ಮರಣೆ ಮಾಡುವುದೇ ಈ ದಿನದ ವಿಶೇಷ ಎಂದರು.
ಕೇವಲ ಸನ್ಯಾಸಿಗಳಷ್ಟೇ ಚಾತುರ್ಮಾಸ್ಯ ವ್ರತ ಮಾಡುವುದಲ್ಲ, ಎಲ್ಲರೂ ಕೊನೆಯಪಕ್ಷ ಎರಡು ತಿಂಗಳಾದರೂ ವ್ರತ ಮಾಡಬೇಕು. ಕೆಟ್ಟ ಮಾತುಗಳನ್ನು ಆಡದೆ, ಚಾಡಿಮಾತು ಹೇಳದೆ, ಕೇಳದೆ, ಕೆಟ್ಟ ಆಲೋಚನೆ ಬಿಟ್ಟು, ಆಹಾರ ನಿಯಮ ಪಾಲಿಸುತ್ತಾ ಮಂತ್ರ ಪಠಣ ಮಾಡಿ ವ್ರತ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಂಡೂರಿ ದತ್ತಾತ್ರೇಯ ಶರ್ಮ ಅವರಿಗೆ ‘ಶ್ರೀಗಣಪತಿ ಸಚ್ಚಿದಾನಂದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸೆಪ್ಟೆಂಬರ್ 26ರವರೆಗೂ ವಿವಿಧ ಕಾರ್ಯಕ್ರಮ ಗಳೊಂದಿಗೆ ಶ್ರೀಗಳ ಚಾತುರ್ಮಾಸ್ಯ ವ್ರತ ನೆರವೇರಲಿದೆ.