ತಿ.ನರಸೀಪುರ ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಮಾ.30ರ ಸೋಮವಾರ ಪುರಾತನ ಪ್ರಸಿದ್ಧ ಶ್ರೀ ಅಗಸ್ತ್ಯೇಶ್ವರಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.  
ಮೈಸೂರು

ಶ್ರೀ ಅಗಸ್ತೇಶ್ವರಸ್ವಾಮಿ ಮಹಾ ರಥೋತ್ಸವ ಇಂದು

ಎಂ.ರವಿ
ತಿ.ನರಸೀಪುರ: ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಮಾ.30ರ ಸೋಮವಾರ ಪುರಾತನ ಪ್ರಸಿದ್ಧ ಶ್ರೀ ಅಗಸ್ತ್ಯೇಶ್ವರಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಕಾವೇರಿ ಕಪಿಲ ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮದ ದಕ್ಷಿಣ ಪ್ರಯಾಗ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ತ್ರಿಮಕೂಟ ಕ್ಷೇತ್ರ(ಹಳೇ ತಿರುಮಕೂಡಲು)ದಲ್ಲಿ ಸೋಮವಾರ ಶಾಲಿವಾಹನ ಶಕ ವರ್ಷಗಳು ಪರಭಾವ ನಾಮ ಸಂವತ್ಸರದ ಚೈತ್ರ ಶುದ್ಧ ಮಖಾ ನಕ್ಷತ್ರ ಕೂಡಿದ ಶುಭ ದಿವಸ, ಮೀನ ಲಗ್ನದಲ್ಲಿ ಶ್ರೀ ಪೂರ್ಣ ಮಂಗಳ ಕಾಮಾಕ್ಷಾಂಭಾ ಸಮೇತ ಶ್ರೀ ಅಗಸ್ತೇಶ್ವರಸ್ವಾಮಿ ಅವರ ಮಹಾ ರಥೋತ್ಸವವು ಯಥಾವಿಧಿಯಾಗಿ ನಡೆಯಲಿದೆ. ಅದಕ್ಕಾಗಿ ದೇವಾಲಯದ ಮುಂಭಾಗ ತೇರನ್ನು ಅಲಂಕರಿಸಲಾಗಿದೆ.
ಮಾ.23ರದಿಂದಲೇ ದೇವಾಲಯದಲ್ಲಿ ಅಂಕುರಾರ್ಪಣ, ಯಾಗಶಾಲಾ ಪ್ರವೇಶದೊಂದಿಗೆ ಧಾರ್ಮಿಕ ಪೂಜಾ ಕಾರ್ಯಗಳನ್ನು ವಿದ್ಯುಕ್ತವಾಗಿ ಆರಂಭಿಸಲಾಗಿದೆ. 24ರಂದು ಧ್ವಜಾರೋಹಣ, ಪೂರ್ವಕ ಭೇರಿತಾಡನ, 25ರಂದು ಚಂದ್ರಮಂಡಲಾರೋಹಣ, 26ರಂದು ಅನಂತ ಪೀಠಾರೋಹಣ, 27ರಂದು ಪುಷ್ಪ ಮಂಟಪಾರೋಹಣ, 28ರ ಶನಿವಾರ ವೃಷಭಾರೋಹಣ ಹಾಗೂ 29ರ ಭಾನುವಾರ ವಸಂತೋತ್ಸವ ಪೂರ್ವಕ ಗಜಾರೋಹಣ ಜರುಗಿದವು.
ಮಾ.30ರ ಸೋಮವಾರ ಮಹಾರಥೋತ್ಸವದ ಬಳಿಕ ಹಂಸಾರೋಹಣ, ರಾತ್ರಿ ತೇರಡಿ ಮಂಟಪೋತ್ಸವ ಸಂಗೀತ, 31ರ ಮಂಗಳವಾರ(ನಾಳೆ) ಶಯನೋತ್ಸವ, ಮೃಗಯಾತ್ರಾಪೂರ್ವಕ ಆಶ್ವಾರೋಹಣ, ಏ.1ರಂದು ದೇವಿಪ್ರಣಯ ಕಲಹಪೂರ್ವಕ ಅವಕೃತೋತ್ಸವ ಸಂಧಾನ ಮಿನೋತ್ತರ ತೀರ್ಥಸ್ಥಾನ ನರಾಂಧೋಳಿಕ ಪೂರ್ವಕ ಉಡುಷೋತ್ಸವ, ತೆಪ್ಪೋತ್ಸವ, ಧ್ವಜಾವರೋಹಣ ಹಾಗೂ 2ರಂದು ಮಹಾಭಿಷೇಕ, ಪೂರ್ವಕ ನಂದಾರೋಹಣ ಕೈಲಾಸ ವಾಹನದೊಂದಿಗೆ ಜಾತ್ರೋತ್ಸವದ ಧಾರ್ಮಿಕ ಉತ್ಸವಗಳಿಗೆ ತೆರೆ ಬೀಳಲಿದೆ.
ಮೇಲುಕೋಟೆಯ ವೈರಮುಡಿ ಉತ್ಸವ ಹಾಗೂ ನಂಜನಗೂಡು ದೊಡ್ಡ ಜಾತ್ರೆಯಷ್ಟೇ ತಿರುಮಕೂಡಲು ತ್ರಿವೇಣಿ ಸಂಗಮದ ತೀರ್ಥ ಸ್ಥಾನಕ್ಕೆ ಮಹತ್ವವಿದೆ. ಶ್ರೀ ಅಗಸ್ತ್ಯ ಮಹಾಮುನಿಗಳಿಂದ ಪ್ರತಿಸ್ಥಾಪಿಸಲ್ಪಟ್ಟ ಶ್ರೀ ಅಗಸ್ತೇಶ್ವರ ದೇವಾಲಯವನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ಇತ್ತೀಚೆಗಷ್ಟೇ ಜೀರ್ಣೋದ್ಧಾರಗೊಳಿಸಲಾಗಿದೆ. ತಿರುಮಕೂಡಲು ಗ್ರಾಮಸ್ಥರ ಸಹಕಾರದಿಂದ ಮಹಾರಥೋತ್ಸವ ತಾಲೂಕು ಆಡಳಿತದಿಂದ ಆಯೋಜಿಸಲಾಗಿದೆ. ಆಸ್ತಿಕ ಮಹಾಶಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವವನ್ನು ಯಶಸ್ವಿಗೊಳಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಧಾರ್ಮಿಕ ದತ್ತಿ ಇಲಾಖೆಯ ಪ್ರಕಟಣೆಯಲ್ಲಿ ಕೋರಿದೆ.
ತಿ.ನರಸಿಪುರ ಹಳೇ ತಿರುಮಕೂಡಲು ನಲ್ಲಿರುವ ಶ್ರೀ ಅಗಸ್ತ್ಯೇಶ್ವರ ದೇವಾಲಯದ ಮುಂಭಾಗ ಮಹಾರಥೋತ್ಸವಕ್ಕೆ ಶೃಂಗರಿಸಿ, ಸಿದ್ಧಪಡಿಸಿರುವ ತೇರು.