ಬೆಟ್ಟದಪುರ ಸಮೀಪದ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ನಿರ್ದೇಶಕರು ಅಭಿನಂದನೆ ಸಲ್ಲಿಸಿದರು. 
ಮೈಸೂರು

ಶ್ಯಾನುಭೋಗನಹಳ್ಳಿ ಡೇರಿಗೆ ಎಸ್.ಆರ್.ಪ್ರಕಾಶ್ ಅಧ್ಯಕ್ಷ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ಮಂಗಳಾ ಅವಿರೋಧವಾಗಿ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪ್ರಕಾಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳಾ ಅವರು ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಹಿತೇಂದ್ರ ಘೋಷಿಸಿದರು.
ಸಂಘದ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ಹಾಲು ಉತ್ಪಾದಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದೆ. ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಸೌಲಭ್ಯಗಳು ದೊರೆಯುವಂತೆ ಹಾಗೂ ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದರು.
ನೂತನ ಅಧ್ಯಕ್ಷ ಎಸ್.ಆರ್.ಪ್ರಕಾಶ್ ಹಾಗೂ ಉಪಾಧ್ಯಕ್ಷೆ ಮಂಗಳಾ ಅವರನ್ನು ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದರು.
ಸಂಘದ ನಿರ್ದೇಶಕರಾದ ಎಸ್.ಜಿ.ಗಣೇಶ್, ಎಸ್.ಟಿ.ರಾಜು, ಎಸ್.ಪಿ.ರಮೇಶ್, ಬಸವರಾಜಪ್ಪ, ಎಸ್.ಸಿ. ರಾಮಚಂದ್ರ, ಎಸ್.ಎಸ್.ನಟೇಶ, ಎಸ್.ಎಂ.ಗಣೇಶ್, ಸವಿತಾ, ಮೂರ್ತಿ, ಸಿಇಒ ಎಸ್.ಕೆ.ನಾಗೇಶ್, ಸಿಬ್ಬಂದಿ ಎಸ್.ಬಿ.ವೆಂಕಟೇಶ್, ಎಸ್.ಜಿ.ಲಿಂಗರಾಜು, ಎಸ್.ಎನ್.ವಸಂತಕುಮಾರ್, ಮುಖಂಡರಾದ ಅಶೋಕಕುಮಾರ್, ಎಸ್.ಎಂ.ಸೋಮಣ್ಣ, ಎಸ್.ಡಿ.ಇಂದ್ರೇಶ್, ಎಸ್.ಎಂ.ದೊಡ್ಡಪ್ಪ, ಎಸ್.ಕೆ.ಸೋಮಶೇಖರ್, ಎಸ್.ಎಸ್.ನಾಗರಾಜಪ್ಪ, ಎಸ್.ಡಿ.ಪುಟ್ಟಸ್ವಾಮಿ, ಎಸ್.ಕೆ.ಜಗದೀಶ್ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಇತರರು ಇದ್ದರು.