ನಗರದಲ್ಲಿ ಆಯೋಜಸಿದ್ದ ಸಮಾಜ ಕಲ್ಯಾಣ ಇಲಾಖೆ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗೆ ಬಿ. ರಂಗೇಗೌಡ ಚಾಲನೆ ನೀಡಿದರು. ಜನಾರ್ದನ್, ಮೇಘಾ, ಶಂಕರ್ ಮೂರ್ತಿ, ಸಿದ್ಲಿಂಗು, ಮೋಹನ್, ಚಂದ್ರಶೇಖರ್, ರಮೇಶ್ ಇದ್ದರು. 
ಮೈಸೂರು

ಹೊಸ ಹುರುಪು ತುಂಬಲಿರುವ ಕ್ರೀಡೆ: ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಕ್ರೀಡೆಗಳು ನೌಕರರಲ್ಲಿ ಹೊಸ ಹುರುಪನ್ನು ತುಂಬಿ, ಕೆಲಸದಲ್ಲಿ ಹೆಚ್ಚಿನ ದಕ್ಷತೆ ತೋರಲು ಸಹಕಾರಿಯಾಗುತ್ತದೆ
  • ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಅಗತ್ಯ
ಮೈಸೂರು: ಕೆಲಸದ ಒತ್ತಡದಲ್ಲೂ ಕ್ರೀಡಾಕೂಟ ನೌಕರರಿಗೆ ದೈಹಿಕ ಹಾಗೂ ಮಾನಸಿಕವಾಗಿ ಮನರಂಜನೆ ನೀಡಲು ಸಹಾಯಕವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ಹೇಳಿದರು.
ಮೈಸೂರು ವಿಭಾಗದ ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕೆಲಸದ ಒತ್ತಡದ ನಡುವೆ ಮನುಷ್ಯ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಮರೆಯಬಾರದು. ಕ್ರೀಡೆಗಳು ನೌಕರರಲ್ಲಿ ಹೊಸ ಹುರುಪನ್ನು ತುಂಬಿ, ಕೆಲಸದಲ್ಲಿ ಹೆಚ್ಚಿನ ದಕ್ಷತೆ ತೋರಲು ಸಹಕಾರಿಯಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜನರ ಸೇವೆಯನ್ನು ಮಾಡುವ ಇಲಾಖೆಯಾಗಿದೆ. ಸಮಾಜ ಕಲ್ಯಾಣ ಇಲಾಖೆಯ ನೌಕರರು ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ಹಾಗೂ ಮನರಂಜನೆ ಪಡೆಯಲು ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರದಿಂದ ಒಂದು ಕೋಟಿ ರೂ. ಅನ್ನು ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನೀಡಲಾಗಿದೆ. ನೌಕರರು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಾಲ್ಯದಲ್ಲಿ ಆಡುತ್ತಿದ್ದ ಆಟಗಳನ್ನು ನೆನಪಿಸಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಮೈಸೂರು ಜಿಲ್ಲೆಯ ಅಲೆಮಾರಿ ಸಮುದಾಯದಲ್ಲಿ ಮೊದಲ ಬಾರಿಗೆ ಕಾನೂನು ಪದವಿ ಪಡೆದ ಅರುಣಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮೈಸೂರು ತಾಲೂಕಿನ ಸಹಾಯಕ ನಿರ್ದೇಶಕ ಜನಾರ್ದನ್, ಚಾಮರಾಜನಗರ ತಾಲೂಕಿನ ಸಹಾಯಕ ನಿರ್ದೇಶಕಿ ಮೇಘಾ, ಕೆ.ಆರ್.ನಗರದ ಸಹಾಯಕ ನಿರ್ದೇಶಕ ಶಂಕರ್ ಮೂರ್ತಿ, ನಂಜನಗೂಡು ತಾಲೂಕಿನ ಸಹಾಯಕ ನಿರ್ದೇಶಕ ಸಿದ್ಲಿಂಗು, ಗುಂಡ್ಲುಪೇಟೆ ತಾಲೂಕಿನ ಸಹಾಯಕ ನಿರ್ದೇಶಕ ಮೋಹನ್, ಪಿರಿಯಾಪಟ್ಟಣ ತಾಲೂಕಿನ ಸಹಾಯಕ ನಿರ್ದೇಶಕ ಚಂದ್ರಶೇಖರ್, ಎಚ್.ಡಿ.ಕೋಟೆ ತಾಲೂಕಿನ ಸಹಾಯಕ ನಿರ್ದೇಶಕ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ನೌಕರರು ಇದ್ದರು.