ನಗರ ಪೊಲೀಸ್ ವಿಭಾಗದಿಂದ ಬುಧವಾರದಿಂದ ಆರಂಭಗೊಂಡ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟಕ್ಕೆ ಉಷಾರಾಣಿ ಚಾಲನೆ ನೀಡಿದರು. ಎಂ.ಆರ್.ಧನುಷ, ಸೀಮಾ ಲಾಟ್ಕರ್, ಆರ್.ಎನ್.ಬಿಂದು ಮಣಿ, ಕೆ.ಎಸ್.ಸುಂದರ್ ರಾಜ್, ಮಾರುತಿ, ಸಿದ್ದನಗೌಡ ಪಾಟೀಲ್ ಇತರರು ಇದ್ದರು.
- ಶಾಲಾ ಪುಸ್ತಕದಿಂದ ದೊರೆಯದ ಪಾಠ, ಕ್ರೀಡೆಯಿಂದ ದೊರೆಯುತ್ತದೆ
- ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮನೆಯಿಂದ ಪ್ರೊತ್ಸಾಹ ನೀಡಬೇಕಿದೆ
ಮೈಸೂರು: ಸ್ಪರ್ಧಾತ್ಮಕ ಭಾವನೆ, ಗುಂಪಿನೊಂದಿಗೆ ಹೊಂದಾಣಿಕೆ, ಸಮಯಪಾಲನೆ, ಶಿಸ್ತನ್ನು ಕಲಿಸುವ ದೇಶದ ಕ್ರೀಡೆಗೆ ಭವ್ಯ ಇತಿಹಾಸವಿದೆ ಎಂದು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ ಹೇಳಿದರು.
ನಗರ ಪೊಲೀಸ್ ವಿಭಾಗದಿಂದ ನಗರ ಸಶಸ್ತ್ರ ಪಡೆ (ಸಿಎಆರ್) ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾ ಪುಸ್ತಕದಿಂದ ದೊರೆಯದ ಪಾಠ, ಕ್ರೀಡೆಯಿಂದ ದೊರೆಯುತ್ತದೆ. ಅಡೆತಡೆಯಿಲ್ಲದ ಜೀವನ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧ್ಯ. ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಒತ್ತಡ ನಿರ್ವಹಣೆ ಸಾಧ್ಯ ಎಂದರು.
ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮನೆಯಿಂದ ಪ್ರೊತ್ಸಾಹ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಮೊದಲ 10 ಸ್ಥಾನದೊಳಗೆ ದೇಶದ ಹೆಸರು ಬರಲು ಶ್ರಮಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಆರ್.ಧನುಷ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್.ಬಿಂದು ಮಣಿ, ಕೆ.ಎಸ್.ಸುಂದರ್ ರಾಜ್, ಮಾರುತಿ, ಸಿದ್ದನಗೌಡ ಪಾಟೀಲ್ ಇದ್ದರು.
ಕ್ರೀಡಾಕೂಟದಲ್ಲಿ ಸಿಎಆರ್, ನರಸಿಂಹರಾಜ ಉಪ ವಿಭಾಗ, ಕೃಷ್ಣರಾಜ ಉಪ ವಿಭಾಗ, ದೇವರಾಜ ಉಪ ವಿಭಾಗ, ವಿಜಯನಗರ ಉಪ ವಿಭಾಗ, ಸಂಚಾರ ಉಪ ವಿಭಾಗ, ವಿಶೇಷ ಪಡೆ, ಮಹಿಳಾ ಪಡೆ, ಅಶ್ವರೋಹಿ ದಳದ ಸಿಬ್ಬಂದಿ ಭಾಗವಹಿಸಿದ್ದಾರೆ.