ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧ್ಯಕ್ಷತೆಯಲ್ಲಿ ತಹಸಿಲ್ದಾರ್, ಎಡಿಎಲ್‌ಆರ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಮೈಸೂರು: ಕಂದಾಯ ಇಲಾಖೆ ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇರಬೇಕು. ಭೂ ಸುರಕ್ಷಾ ಯೋಜನೆ, ಆರ್‌ಟಿಸಿಗಳಿಗೆ ಆಧಾರ್ ಜೋಡಣೆಯನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಹಸಿಲ್ದಾರ್, ಎಡಿಎಲ್‌ಆರ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಮೇಲೆ ವಿಶೇಷ ಗಮನ ಹರಿಸಿದೆ. ಕಂದಾಯ ಇಲಾಖೆಯು ಜನಸಾಮಾನ್ಯರಿಗೆ ಹತ್ತಿರವಾಗಿರುವ ಇಲಾಖೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ವಿಳಂಬವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಭೌತಿಕವಾಗಿ ಜಮೀನು ಸರ್ವೆ, ಅಳತೆ ಮಾಡಿ ಖಾತೆಗಳನ್ನು ಮಾಡಿದ್ದರೂ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದರೆ ಮಾತ್ರ ಪ್ರಗತಿ ಸಾಧಿಸಿದಂತಾಗುತ್ತದೆ. ಅಪ್ಲೋಡ್ ಮಾಡದೆ ಕೇವಲ ಮಾತಿನಲ್ಲಿ ಹೇಳಿದರೆ ಪರಿಗಣಿಸಲು ಸಾಧ್ಯವಿಲ್ಲ. ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯು ಮೊದಲನೇ ಸ್ಥಾನಕ್ಕೆ ತಲುಪಲು ತಹಸಿಲ್ದಾರ್‌ಗಳು ಶ್ರಮಿಸಬೇಕು ಎಂದರು.
ಜಿಲ್ಲೆಯಲ್ಲಿ 2,74,31,435 ದಾಖಲೆಗಳು ಇದ್ದು, ಈಗಾಗಲೇ 8,91,525 ಪುಟಗಳನ್ನು ಸ್ಕಾೃನ್ ಮಾಡಿ ಅಪ್ಲೋಡ್ ಮಾಡಲಾಗಿದೆ. ಪ್ರತಿ ತಾಲೂಕಿಗೂ ಒಂದು ವಾರಕ್ಕೆ 12 ಸಾವಿರ ದಾಖಲೆಗಳನ್ನು ಸ್ಕಾೃನ್‌ಮಾಡಿ ಅಪ್ಲೋಡ್ ಮಾಡುವ ಗುರಿ ನೀಡಲಾಗುತ್ತಿದೆ. ಇನ್ನೂ ಮೂರು ತಿಂಗಳೊಳಗೆ ಎಲ್ಲ ದಾಖಲೆಗಳನ್ನು ಸ್ಕಾೃನ್ ಮಾಡಿ ಅಪ್ಲೋಡ್ ಮಾಡಬೇಕು. ಇಲವಾಲ ಹೋಬಳಿಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡು ಎಲ್ಲ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಕೊಡಲಾಗುತ್ತಿದೆ. ಈಗ ರಾವಂದೂರು, ಚಿಕ್ಕಯ್ಯನಛತ್ರ, ಮಿರ್ಲೆ ಹೋಬಳಿಗಳನ್ನು ಸಹ ಪೈಲಟ್ ಪ್ರಾಜೆಕ್ಟ್‌ಗೆ ತೆಗೆದುಕೊಳ್ಳಲಾಗುತ್ತಿದೆ. ಮುಂದೆ ಎಲ್ಲಾ ಕಡೆಗಳಲ್ಲೂ ಜನರಿಗೆ ಲಭ್ಯವಿರುವ ದಾಖಲೆಗಳನ್ನು ಗಣಕೀಕೃತವಾಗಿಯೇ ನೀಡಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ, ಡಿಡಿಎಲ್‌ಆರ್ ರಮ್ಯಾ, ಎಡಿಎಲ್‌ಆರ್ ಚಿಕ್ಕಣ್ಣ ಮತ್ತಿತರರು ಹಾಜರಿದ್ದರು.