ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯೆ ಡಾ. ಆಶಾ ಲಕ್ರಾ ಅವರು ಹೊಸಹಳ್ಳಿ ವಿವೇಕ ಸ್ಕೂಲ್ ಆಫ್ ಲರ್ನಿಂಗ್ ಸಂಸ್ಥೆಗೆ ಭೇಟಿ ನೀಡಿ ತರಬೇತಿ ಕಾರ್ಯಕ್ರಮ ವೀಕ್ಷಿಸಿದರು. ಕುಶೇಸ್ವರ್, ಸವಿತಾ, ಮಲ್ಲೇಶ್ ಇತರರು ಇದ್ದರು.
- ಪರಿಶಿಷ್ಟ ಪಂಗಡದ ಜನರಿಗೆ ರಕ್ಷಣೆ ನೀಡಿ ಗೌರವಯುತ ಜೀವನ ನಡೆಸಲು ಸಹಕಾರ ನೀಡುವುದು ಆಯೋಗದ ಉದ್ದೇಶವಾಗಿದೆ
- ಯಾವುದೇ ರೀತಿಯ ದೌರ್ಜನ್ಯ ಉಂಟಾದಲ್ಲಿ ಆಯೋಗಕ್ಕೆ ದೂರು ಸಲ್ಲಿಸಿ
ಮೈಸೂರು:ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಸದಸ್ಯೆ ಡಾ. ಆಶಾ ಲಕ್ರಾ ಅವರು ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಜೇನು ಕುರುಬ ಮಹಿಳೆಯರು ನಡೆಸುತ್ತಿರುವ ಸಿರಿಧಾನ್ಯ ಸ್ಟೋರ್ಸ್‌ಗೆ ಭೇಟಿ ನೀಡಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ಸಿರಿಧಾನ್ಯ ಸ್ಟೋರ್ಸ್‌ಅನ್ನು 11 ಮಹಿಳೆಯರು ನಡೆಸುತ್ತಿದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ರತ್ನಮ್ಮ ಮಾತನಾಡಿ, ನನ್ನ ಜೀವನ ಈ ಹಿಂದೆ ಕಷ್ಟಕರವಾಗಿತ್ತು. ಕೆಲಸಕ್ಕಾಗಿ ಕೊಡಗು, ಕೇರಳಕ್ಕೆ ವಲಸೆ ಹೋಗುತ್ತಿದ್ದೆ. ಪ್ರತಿ ದಿನ ಬೆಳಗಿನಿಂದ ರಾತ್ರಿಯವರೆಗೆ ಕೂಲಿ ಕೆಲಸ ಮಾಡಬೇಕಿತ್ತು. ಈಗ ಸಿರಿಧಾನ್ಯ ಸ್ಟೋರ್ ಮೂಲಕ ಆರ್ಥಿಕವಾಗಿ ಸದೃಢ ಜೀವನ ನಡೆಸುತ್ತಿರುವುದಾಗಿ ತಿಳಿಸಿದರು.
ವಿವಿಧ ಹಾಡಿಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನರಿಗೆ ರಕ್ಷಣೆ ನೀಡಿ ಗೌರವಯುತ ಜೀವನ ನಡೆಸಲು ಸಹಕಾರ ನೀಡುವುದು ಆಯೋಗದ ಉದ್ದೇಶವಾಗಿದೆ. ಯಾವುದೇ ರೀತಿಯ ದೌರ್ಜನ್ಯ ಉಂಟಾದಲ್ಲಿ ಆಯೋಗಕ್ಕೆ ದೂರು ಸಲ್ಲಿಸಿ ಎಂದು ಸದಸ್ಯರಾದ ಆಶಾ ಲಕ್ರಾ ಅವರು ತಿಳಿಸಿದರು.
ಇವರು ಬೆಳೆಯುವ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಹೊಸ ತರಬೇತಿಗಳನ್ನು ನೀಡಿ, ಎಲ್ಲ ಉತ್ಪನ್ನಗಳನ್ನು ಜಿಯೋ ಟ್ಯಾಗಿಂಗ್ ಮಾಡಿ. ಸಹಕಾರ ಭಾರತಿ ಸಹಕಾರ ಸಂಸ್ಥೆಯೊಂದಿಗೆ ಮಾರಾಟಕ್ಕೆ ಆನ್‌ಲೈನ್ ವೇದಿಕೆ ಮಾಡಿಕೊಡುವಂತೆ ತಿಳಿಸಿದರು.
ಜಾಗನಕೋಟೆ ಹಾಡಿಯಲ್ಲಿ ಪ್ರಕೃತಿ ಫುಡ್ ಪ್ರಾಡಕ್ಟ್ ರಾಗಿಯಿಂದ ವಿವಿಧ ಬಗೆ ಆಹಾರ ತಯಾರಿಸುವ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚೆ ನಡೆಸಿದಾಗ, ರಾಗಿಯಿಂದ ಸುಮಾರು 11 ವಿಧದ ಆಹಾರ ಪದಾರ್ಥ ತಯಾರಿಸಿ ಸುಮಾರು 1.50 ಲಕ್ಷ ರೂ. ಗಳ ಆಹಾರ ಪದಾರ್ಥ ಮಾರಾಟ ಮಾಡಲಾಗುತ್ತಿದೆ ಎಂದು ಮಹಿಳೆಯರು ತಿಳಿಸಿದರು.
ಹಳ್ಳಿಯ ಸುತ್ತಮುತ್ತಲು ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಮನೆಯಲ್ಲಿ ಗಂಡಸರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ನಾವು ಎಷ್ಟೇ ಶ್ರಮ ವಹಿಸಿದರು ಮನೆಯಲ್ಲಿ ನೆಮ್ಮದಿ ಇಲ್ಲವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯರು, ತಕ್ಷಣ ಅಬಕಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ತಿಳಿಸಲಾಗುವುದು. ಈ ಮೂಲಕ ಅಕ್ರಮ ಮದ್ಯ ಮಾರಾಟ ತಡೆಯುವಂತೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೊಸಹಳ್ಳಿ ವಿವೇಕ ಸ್ಕೂಲ್ ಆಫ್ ಲರ್ನಿಂಗ್ ಸಂಸ್ಥೆಗೆ ಭೇಟಿ ನೀಡಿ ಶಾಲೆಯ ವಾತಾವರಣ ಸೇರಿದಂತೆ ಸೌಲಭ್ಯಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು. ಹೆಣ್ಣು ಮಕ್ಕಳಿಗೂ ಮೆಕ್ಯಾನಿಕಲ್ ಟೂಲ್ ತರಬೇತಿ ನೀಡಬೇಕು, ಟಿ.ಎಸ್.ಪಿ ಅನುದಾನದಲ್ಲಿ ಟೈಲರಿಂಗ್ ವೃತ್ತಿಯಲ್ಲಿ ವಿಶೇಷ ಕೌಶಲ ತರಬೇತಿ ನೀಡುವಂತೆ ತಿಳಿಸಿದರು.
ಆಯೋಗದ ಸದಸ್ಯರ ಆಪ್ತ ಕಾರ್ಯದರ್ಶಿ ಕುಶೇಸ್ವರ, ಕಾನೂನು ಸಲಹೆಗಾರ ರಾಹುಲ್ ಯಾದವ, ತನಿಖಾಧಿಕಾರಿ ರಿಯಾ ರಾಹುಲ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಮಲ್ಲೇಶ, ಎಚ್.ಡಿ.ಕೋಟೆ ನೋಡಲ್ ಅಧಿಕಾರಿ ಮಹೇಶ್, ಹುಣಸೂರು ನೋಡಲ್ ಅಧಿಕಾರಿ ಗಂಗಾಧರ,
ಸ್ವಾಮಿ ವಿವೇಕನಂದ ಯುತ್ ಮೂವ್‌ಮೆಂಟ ನಿರ್ದೇಶಕ ಡಾ.ಚೌಹಾಣ್, ಸಿಇಒ ಸವಿತಾ ಇತರರು ಇದ್ದರು.