- ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ
- ಚಾ.ಬೆಟ್ಟದ ದೇಗುಲಗಳಲ್ಲಿ ಆದಾಯ ಸೋರಿಕೆ ತಡೆಗೆ ಕ್ರಮ
- ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ
ಮೈಸೂರು: ಚಾಮುಂಡಿಬೆಟ್ಟದ ಸಮೂಹ ದೇವಾಲಯಗಳಲ್ಲಿ ಭಕ್ತರು ನಡೆಸುವ ವಿವಿಧ ಸೇವೆಗಳಿಂದ ಬರುವ ಆದಾಯ ಸೋರಿಕೆ ತಡೆ ಹಾಗೂ ವಿಶೇಷ ಸೇವೆಗೆ ತಕ್ಕಂತೆ ಪ್ರತ್ಯೇಕ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು.
ಚಾಮುಂಡಿಬೆಟ್ಟದ ಸಮೂಹ ದೇವಾಲಯಗಳಲ್ಲಿ ಭಕ್ತರು ನಡೆಸುವ ವಿವಿಧ ಸೇವೆಗಳಿಂದ ದೇವಾಲಯಕ್ಕೆ ಬರುವ ಆದಾಯ ಸೋರಿಕೆಯಾಗಬಾರದು. ಒಂದೊಂದು ದೇವಾಲಯದಲ್ಲೂ ಒಂದೊಂದು ಸೇವೆಗೆ ಅಧಿಕ ದರ ಪಡೆಯಲಾಗುತ್ತಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪೂಜೆ, ವಿವಿಧ ಸೇವೆಗಳಿಗೆ ದರ ನಿಗದಿ ಮಾಡಿ, ಭಕ್ತರಿಗೆ ಕಾಣುವಂತೆ ದೇವಾಲಯಗಳಲ್ಲಿ ದರಗಳ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮಾತನಾಡಿ, ಚಾಮುಂಡಿಬೆಟ್ಟದಲ್ಲಿನ ಸಮೂಹ ದೇವಾಲಯಗಳಲ್ಲಿ ಪ್ರತಿದಿನ ವಿಶೇಷ ಪೂಜೆ ಜರುಗುತ್ತವೆ. ಇದರಲ್ಲಿ ಕೆಲ ಸೇವೆಗಳ ಶುಲ್ಕ ಲೆಕ್ಕಕ್ಕೆ ಬಾರದ ಕಾರಣ ಏಕರೂಪದ ಶುಲ್ಕ ವಿಧಿಸಿದರೆ ಅನುಕೂಲವಾಗುತ್ತಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿನ ಸೇವೆಗಳಿಗೆ ಈಗಾಗಲೇ ದರ ನಿಗದಿಯಾಗಿದೆ. ಬೆಣ್ಣೆ ಅಲಂಕಾರ ಸೇವೆಗೆ ನೂರು ರೂ. ನಿಗದಿಪಡಿಸಿದ್ದರೆ, ಭಕ್ತಾದಿಗಳಿಂದ ಎರಡರಿಂದ ಮೂರು ಸಾವಿರ ರೂ. ಪಡೆಯಲಾಗುತ್ತದೆ. ಕೆಲವೆಡೆ ಅನುಕೂಲಕ್ಕೆ ತಕ್ಕಂತೆ ಸೇವಾ ಶುಲ್ಕ ಪಡೆಯಲಾಗುತ್ತಿದೆ ಎಂದು ಭಕ್ತರು ದೂರಿದ್ದಾರೆ. ಹಾಗಾಗಿ ಏಕರೂಪದ ದರ ನಿಗದಿಪಡಿಸಿದರೆ ಸೂಕ್ತ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಎಲ್ಲ ದೇವಾಲಯಗಳಿಗೂ ಒಂದೇ ರೀತಿ ಸೇವಾ ಶುಲ್ಕ ವಿಧಿಸುವುದು ಸರಿಯಲ್ಲ. ಪ್ರಸ್ತುತ ಯಾವ ದೇವಾಲಯದಲ್ಲಿ ಎಷ್ಟು ಶುಲ್ಕ ಪಡೆಯಲಾಗುತ್ತಿದೆ? ಮುಂದೆ ಎಷ್ಟು ಹೆಚ್ಚಿಸಬಹುದು ? ಯಾವ ರೀತಿ ನಿರ್ವಹಣೆ ಮಾಡಬೇಕು? ಎಂಬುದರ ವರದಿ ಕೊಡಿ, ನಂತರ ಪರಿಶೀಲನೆ ನಡೆಸಿ ನೂತನ ಸೇವಾ ದರವನ್ನು ಜಾರಿಗೆ ತನ್ನಿ ಎಂದು ಸೂಚಿಸಿದರು.
ಹೆಚ್ಚಿದ ದೇವಾಲಯದ ಆದಾಯ
ದೇವಾಲಯದಿಂದ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ದರವನ್ನು 15 ರೂ.ನಿಂದ 25 ರೂ.ಗೆ, ಪ್ರವೇಶ ದರ 30ರಿಂದ 50 ರೂ, ಹಾಗೂ 100ರಿಂದ 200 ರೂ.ಗೆ ಹೆಚ್ಚಳ ಮಾಡಿರುವುದರಿಂದ ಆದಾಯ ಹೆಚ್ಚಾಗಿದೆ. 2025-26ರ ಅವಧಿಯಲ್ಲಿ 13 ಕೋಟಿ ರೂ. ಆದಾಯವಿತ್ತು. ಮುಂದಿನ ವರ್ಷ ಮತ್ತಷ್ಟು ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು.
ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಮಾಸ್ಟರ್‌ಪ್ಲಾನ್ ರೂಪಿಸಲಾಗಿದ್ದು, ಕೆಲ ಬದಲಾವಣೆ, ಮಾರ್ಪಾಡು ಮಾಡಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮುಂದೆ ನಡೆಯುವ ಸಭೆಯಲ್ಲಿ ಮಂಡಿಸುವಂತೆ ಸೂಚಿಸಿದರು.
ಬೀದಿಬದಿ ವ್ಯಾಪಾರ ತೆರವುಗೊಳಿಸಿ
ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗುವ ಮಾರ್ಗ, ಪಾರ್ಕಿಂಗ್ ಕಟ್ಟಡದ ಮಾರ್ಗ, ಮಹಿಷಾಸುರ ಪ್ರತಿಮೆ ಮಾರ್ಗದಲ್ಲಿರುವ ಬೀದಿಬದಿ ವ್ಯಾಪಾರಿಗಳನ್ನು ಏಕಕಾಲದಲ್ಲಿ ತೆರವುಗೊಳಿಸಬೇಕಾಗಿದೆ ಕಾರ್ಯದರ್ಶಿ ರೂಪಾ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ವಿಷಯ ಮಂಡಿಸೋಣ. ಅವರ ಸಲಹೆಯಂತೆ ಮುಂದೆ ತೀರ್ಮಾನಿಸೋಣ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಎಓ ಎಸ್.ಯುಕೇಶ್ ಕುಮಾರ್, ಡಿಸಿಪಿ ಆರ್.ಎನ್.ಬಿಂದುಮಣಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು, ಪ್ರಾಧಿಕಾರದ ಉಪ ಕಾರ್ಯದರ್ಶಿ, ವ್ಯವಸ್ಥಾಪಕರು ಸೇರಿದಂತೆ ಮತ್ತಿತರರು ಇದ್ದರು.
ಶಿಷ್ಟಾಚಾರದ ಕೊಠಡಿ ತೆರೆಯಲು ನಿರ್ಧಾರ
ತಿರುಪತಿ, ಕಾಶಿ ಮಾದರಿಯಲ್ಲಿ ದಸರಾ ಹಾಗೂ ಆಷಾಢಮಾಸ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಚಾಮುಂಡಿಬೆಟ್ಟದಲ್ಲಿ ಗಣ್ಯರು ಹಾಗೂ ಅತಿ ಗಣ್ಯರಿಗಾಗಿ ಶಿಷ್ಠಾಚಾರ ಪಾಲಿಸಲು ಪ್ರತ್ಯೇಕ ಶಿಷ್ಟಾಚಾರದ ಕೊಠಡಿ ತೆರೆಯಲು ನಿರ್ಧರಿಸಲಾಗಿದೆ.
ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮಾಹಿತಿ ನೀಡಿ, ಆಷಾಢಮಾಸ, ದಸರಾ ಮಹೋತ್ಸವದ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಐಪಿ, ವಿವಿಐಪಿಗಳು ಬರುತ್ತಾರೆ. ಈ ವೇಳೆ ಶಿಷ್ಟಾಚಾರ ಇಲ್ಲದಿದ್ದರೂ ಕೆಲವರು ವಿಐಪಿಗಳಿಗೆ ನೀಡುವ ಶಿಷ್ಟಾಚಾರದ ನೀರೀಕ್ಷೆಯಲ್ಲಿ ಬರುತ್ತಾರೆ. ಆ ಕಾರಣದಿಂದ ತಿರುಪತಿ ಮತ್ತು ಕಾಶಿಯಲ್ಲಿ ತೆರೆದಿರುವಂತೆ ಚಾಮುಂಡಿಬೆಟ್ಟದಲ್ಲೂ ಶಿಷ್ಟಾಚಾರದ ಕೌಂಟರ್ ತೆರೆಯುವ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಇತ್ತೀಚೆಗೆ ಕಾಶಿಗೆ ಹೋಗಿದ್ದಾಗ ಶಿಷ್ಟಾಚಾರದ ಕೊಠಡಿಗೆ ಭೇಟಿ ನೀಡಿದ್ದೆ. ಆ ಕೊಠಡಿಗೆ ಹೋಗಿ ಹೇಳಿದ ಮೇಲೆ ದರ್ಶನ ಮುಗಿಸಿ ವಾಪಸ್ ಬರುವವರೆಗೂ ಉತ್ತಮ ವ್ಯವಸ್ಥೆ ಮಾಡಿದ್ದರು. ತಿರುಮಲ ತಿರುಪತಿಯಲ್ಲಿಯೂ ಶಿಷ್ಟಾಚಾರದ ಕೊಠಡಿಯ ವ್ಯವಸ್ಥೆ ಇದೆ. ಅದೇ ಮಾದರಿಯಲ್ಲಿ ಚಾಮುಂಡಿಬೆಟ್ಟದಲ್ಲೂ ವ್ಯವಸ್ಥೆ ಅಳವಡಿಸಿಕೊಂಡು ಜನವರಿ ತಿಂಗಳಲ್ಲೇ ಜಾರಿಗೆ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಶಿಷ್ಟಾಚಾರ ಕೊಠಡಿಯನ್ನು ತೆರೆಯುವುದರಿಂದ ಯಾರೇ ವಿವಿಐಪಿ, ವಿಐಪಿಗಳು ದರ್ಶನಕ್ಕೆ ಬರುವ ದಿನಾಂಕ, ಸಮಯ ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಯಾವುದೇ ಗೊಂದಲ, ಅನಾನುಕೂಲಕ್ಕೆ ಅವಕಾಶ ಇರುವುದಿಲ್ಲ. ಜನವರಿಯಿಂದ ಈ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
15 ನಿಮಿಷದಲ್ಲೇ ದರ್ಶನ
ಚಾಮುಂಡಿಬೆಟ್ಟದಲ್ಲಿ ಸಾರ್ವಜನಿಕರ ಉಚಿತ ಪ್ರವೇಶ ಅಲ್ಲದೆ ಗೇಟ್-2 ಪ್ರವೇಶ ದರವನ್ನು 30 ರೂ.ನಿಂದ 50 ರೂ., ಗೇಟ್-1 ಪ್ರವೇಶ ದರವನ್ನು 100 ರೂ.ನಿಂದ 200 ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಒಂದು ಸಾವಿರ ರೂ. ದರದ ವಿಶೇಷ ಪ್ರವೇಶದ ಟಿಕೆಟ್‌ಗಳನ್ನು ಜ.1ರಿಂದ ಜಾರಿಗೆ ತರಲಾಗುತ್ತದೆ. ಒಂದು ಸಾವಿರ ರೂ. ಟಿಕೆಟ್ ಪಡೆದ ಭಕ್ತರಿಗೆ ಯಾವುದೇ ಅಡಚಣೆ ಆಗದಂತೆ ಹದಿನೈದು ನಿಮಿಷಗಳಲ್ಲಿ ನೇರ ದರ್ಶನ ಮುಗಿಸಿ ತೆರಳುವಂತೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಸ್ಥಾನದ ಹಿಂಬದಿಯ ಪ್ರವೇಶ ದ್ವಾರದ ಬಳಿ 50 ರೂ, 200 ರೂ. ಟಿಕೆಟ್ ಪಡೆದವರಿಗೆ ಅವಕಾಶ ಇದ್ದರೆ, ಒಂದು ಸಾವಿರ ರೂ. ಟಿಕೆಟ್ ಪಡೆದವರಿಗೆ ಮುಂಬಾಗಿಲಿನಿಂದ ಕಳುಹಿಸಲಾಗುತ್ತದೆ. ಇದರಿಂದಾಗಿ ಯಾವುದೇ ದೂರು, ಅಪಸ್ವರಗಳಿಗೆ ಅವಕಾಶ ಇಲ್ಲದಂತೆ ನಿರ್ವಹಣೆ ಮಾಡಲಾಗುವುದು ಎಂದು ಕಾರ್ಯದರ್ಶಿ ಎಂ.ಜೆ.ರೂಪಾ ಸಭೆಯಲ್ಲಿ ವಿಷಯ ಮಂಡಿಸಿದರು.