ಮೈಸೂರಿನಲ್ಲಿ ಸಿದ್ಧಗೊಂಡು ಉತ್ತರ ಪ್ರದೇಶಕ್ಕೆ ರವಾನೆಗೊಂಡ ಉತ್ತಮ ಕೆತ್ತನೆ ವಿನ್ಯಾಸದ ಸ್ಪೀಕರ್ ಪೀಠ.
- ಬೀಟೆ ಮರದ ಮೇಲೆ ಸೂಕ್ಷ್ಮವಾದ ಕೆತ್ತನೆ, ಪಾರಂಪರಿಕ ಶೈಲಿ, ವಿವಿಧ ವಿನ್ಯಾಸದ ಪೀಠ
- ಮೈಸೂರಿನ ಪಾರಂಪರಿಕ ಕರಕುಶಲ ಪರಂಪರೆ ರಾಷ್ಟ್ರಮಟ್ಟ ಛಾಪು
ಮೈಸೂರು:ಉತ್ತರ ಪ್ರದೇಶದ ವಿಧಾನಸಭಾಧ್ಯಕ್ಷರಿಗೆ ಇತ್ತೀಚೆಗೆ ರವಾನೆಗೊಂಡ ಸ್ಪೀಕರ್ ಪೀಠವನ್ನು ನಗರದ ಕರಕುಶಲ ಶಿಲ್ಪಿ ಲಷ್ಕರ್ ಮೊಹಲ್ಲಾ ನಿವಾಸಿ ಕೈಸರ್ ಅಲಿ ಖಾನ್ ಅವರು ಸಜ್ಜುಗೊಳಿಸಿದ್ದಾರೆ.
ಬೀಟೆ ಮರದ ಮೇಲೆ ಸೂಕ್ಷ್ಮವಾದ ಕೆತ್ತನೆ, ಪಾರಂಪರಿಕ ಶೈಲಿ, ವಿವಿಧ ವಿನ್ಯಾಸದಲ್ಲಿ ಪೀಠವನ್ನು ರೂಪುಗೊಳಿಸಲಾಗಿದೆ. ಈ ಮೂಲಕ ಕರ್ನಾಟಕದ ಶಿಲ್ಪಕಲಾ ವೈಭವ ಉತ್ತರ ಭಾರತದ ವಿಧಾನಸಭೆಯೊಳಗೆ ಪ್ರತಿಧ್ವನಿಸಿದೆ.
ರಾಜ ಮಹಾರಾಜರ ಕಾಲದಿಂದಲೂ ಬೆಳೆದು ಬಂದಿರುವ ಪಾರಂಪರಿಕ ಕರಕುಶಲ ಪರಂಪರೆ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಈ ಹಿಂದೆ ಆಯೋಧ್ಯೆಯಲ್ಲಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿ ಆ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ರಾಷ್ಟ್ರದ ಗಮನ ಸೆಳೆದಿತ್ತು. ಈಗ ಕೈಸರ್ ಅಲಿ ಖಾನ್ ಅವರ ಕಲಾ ನೈಪುಣ್ಯದಿಂದ ಮೈಸೂರಿಗೆ ಹೊಸ ಗೌರವ ದೊರಕಿದೆ.
1956ರಲ್ಲಿ ಸ್ಥಾಪಿಸಲಾದ ಕರ್ನಾಟಕ ವಿಧಾನಸಭಾಧ್ಯಕ್ಷರ ಪೀಠ ಅತ್ಯಂತ ಆಕರ್ಷಕವಾಗಿದೆ. ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಆಣತಿಯಂತೆ ಹುಣಸೂರು ಬೀಟೆಮರ ಹಾಗೂ ಶಿವಮೊಗ್ಗದ ಗುಡಿಕಾರರಿಂದ ಈ ಪೀಠ ಕೆತ್ತನೆಯಾಗಿತ್ತು. ಸ್ಪೀಕರ್ ಆಸೀನರಾಗುವ ಪೀಠದ ಮೇಲ್ತುದಿಯಲ್ಲಿ ಕೊಡೆ ಹಾಗೂ ರಾಷ್ಟ್ರ ಲಾಂಛನದ ಕೆತ್ತನೆಯಿದೆ. ಸಭಾಧ್ಯಕ್ಷರ ಕೈ ಇಟ್ಟು ಕೂರುವಲ್ಲಿ ಅರ್ಧ ಸಿಂಹ ಹಾಗೂ ಆನೆಯ ಕಲಾಕೃತಿ ಒಳಗೊಂಡಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಾಮನ್‌ವೆಲ್ತ್ ಸಮ್ಮೇಳನಕ್ಕೆ ಬಂದಿದ್ದ ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನ ಇದನ್ನು ಗಮನಿಸಿ ಆಕರ್ಷಿತರಾಗಿ ಇಂತಹದ್ದೇ ಪೀಠವನ್ನು ಬಯಸಿದ್ದರು.
ಕರ್ನಾಟಕದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರ ಜತೆ ಚರ್ಚಿಸಿ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನ ಮರದ ಕೆತ್ತನೆಕಾರ ಕೈಸರ್ ಅಲಿ ಖಾನ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಉತ್ತರ ಪ್ರದೇಶದ ವಿಧಾನಸಭೆ ಸ್ಪೀಕರ್ ಅವರಿಗೆ ಪೀಠಾಸೀನ ಸಿದ್ಧಗೊಂಡು ಅಲ್ಲಿಗೆ ರವಾನಿಸಲಾಗಿದೆ.