ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು. ಡಾ.ಡಿ.ಎಸ್.ಪ್ರತಿಮಾ, ಆರ್.ಶಶಿ ಶೇಖರ್, ಪಿ.ಕೃಷ್ಣೇಗೌಡ, ಪ್ರಾಚಾರ್ಯ ಡಾ.ರೇಚಣ್ಣ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಸೌಮ್ಯ ಇನ್ನಿತರರಿದ್ದರು. 
ಮೈಸೂರು

ಬಾಹ್ಯಾಕಾಶ ಸಂಶೋಧನೆ ವೈಜ್ಞಾನಿಕ ಪ್ರಗತಿಗೆ ಅಡಿಪಾಯ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಡಾ.ಡಿ.ಎಸ್.ಪ್ರತಿಮಾ ಅಭಿಪ್ರಾಯ
  • ರಾಜ್ಯಮಟ್ಟದ ವಿಚಾರ ಸಂಕಿರಣ
 ಮೈಸೂರು: ಬಾಹ್ಯಾಕಾಶ ವಿಜ್ಞಾನವು ವಿಜ್ಞಾನಿಗಳಿಗೆ ಮಾತ್ರ ಮೀಸಲಾದ ವಿಷಯವಲ್ಲ. ಅದು ಜನಸಾಮಾನ್ಯರ ಬದುಕಿನೊಂದಿಗೂ ಬೆಸೆದುಕೊಂಡಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಡಿ.ಎಸ್.ಪ್ರತಿಮಾ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜೋತಿ ಸಭಾಂಗಣದಲ್ಲಿ ‘ಬಾಹ್ಯಾಕಾಶ ಗಡಿನಾಡುಗಳು: ನಾವೀನ್ಯತೆಗಳು, ಪರಿಶೋಧನೆ ಮತ್ತು ಅನ್ವೇಷಣೆ’ ಕುರಿತು ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬಾಹ್ಯಾಕಾಶ ಸಂಶೋಧನೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ, ಪ್ರಸ್ತುತ ಯುಗದ ಎಲ್ಲ ಜ್ಞಾನ ಶಿಸ್ತುಗಳ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಎಲ್ಲ ವೈಜ್ಞಾನಿಕ ಪ್ರಗತಿಗಳ ಅಡಿಪಾಯವಾಗಿದೆ ಎಂದು ತಿಳಿಸಿದರು.
ಬಾಹ್ಯಾಕಾಶ ವಿಜ್ಞಾನವು ಸಂವಹನ, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ, ಕೃಷಿ, ಆರೋಗ್ಯ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಯ ಮೂಲಕ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಚಂದ್ರಯಾನ, ಮಂಗಳಯಾನ, ಆದಿತ್ಯ-ಎಲ್1 ಮತ್ತು ಇತರ ಕಾರ್ಯಾಚರಣೆಗಳೊಂದಿಗೆ ಇಸ್ರೋ ಗಮನಾರ್ಹ ಸಾಧನೆ ಮಾಡಿದ್ದು, ಇದು ಲಕ್ಷಾಂತರ ಯುವ ಮನಸ್ಸು ಆಕಾಶದಾಚೆಗೆ ಕನಸು ಕಾಣುವಂತೆ ಪ್ರೇರೇಪಿಸಿದೆ ಎಂದರು.
ಪ್ರಶ್ನೆ ಕೇಳುವುದನ್ನು ಎಂದಿಗೂ ನಿಲ್ಲಿಸಬೇಡಿ. ಪ್ರತಿಯೊಂದು ಆವಿಷ್ಕಾರವು ಕುತೂಹಲದಿಂದ ಪ್ರಾರಂಭವಾಯಿತು. ಇದು ಭವಿಷ್ಯವು ಕಲ್ಪಿಸಿಕೊಳ್ಳಲು, ಅನ್ವೇಷಿಸಲು ಮತ್ತು ಹೊಸತನ ಕಂಡುಕೊಳ್ಳಲು ಕಾರಣವಾಗಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಉತ್ಸಾಹ ಬೆಳಗಿಸಲಿ. ಸಮರ್ಪಣೆ ಮತ್ತು ಪರಿಶ್ರಮದಿಂದ ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ವಿಜ್ಞಾನ ಮತ್ತು ನಾವಿನ್ಯತೆ ಒಂದು ನಾಣ್ಯದ ಎರಡು ಮುಖಗಳು. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಜ್ಞಾನದಲ್ಲಿ ತೀಕ್ಷ್ಣವಾದ ವೀಕ್ಷಣೆ ಬಹುಮುಖ್ಯವಾಗಿದೆ. ನಾವಿನ್ಯತೆಯನ್ನು ಮೂಡಿಸಲು ವಿದ್ಯಾರ್ಥಿಗಳು ಜಗತ್ತನ್ನು ಸೂಕ್ಷ್ಮವಾಗಿ ವೀಕ್ಷಿಸಬೇಕಾಗಿದೆ. ಪ್ರಕೃತಿ ನಮ್ಮ ಅತ್ಯುತ್ತಮ ಗುರು. ಮಾನವ ಕುಲವೂ ನಿರಂತರವಾಗಿ ಕಲಿಯಲು ಮತ್ತು ವಿಕಸನಗೊಳ್ಳಲು ಸದಾ ಪ್ರೇರೇಪಿಸುತ್ತದೆ ಎಂದರು.
ವಿದ್ಯಾರ್ಥಿಗಳು ನಾವಿನ್ಯತೆಯ ನಿಜವಾದ ಮನೋಭಾವ ಆಳವಾಗಿ ಅರ್ಥಮಾಡಿಕೊಳ್ಳಲು ಮೂಲ ಪಠ್ಯಪುಸ್ತಕ ಓದಬೇಕು. ಜತೆಗೆ ಶ್ರೇಷ್ಠ ವಿಜ್ಞಾನಿಗಳ ಜೀವನದ ಸಾಧನೆ ಅಧ್ಯಯನ ಮಾಡಬೇಕಿದೆ ಎಂದರು.
ಇಸ್ರೋದ ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಆರ್.ಶಶಿಶೇಖರ್ ಮಾತನಾಡಿ, ಬಾಹ್ಯಾಕಾಶಕ್ಕೆ ಯಾವುದೇ ಗಡಿಗಳು ಇರುವುದಿಲ್ಲ. ಅದು ಯಾವುದೇ ತಪ್ಪುಗಳನ್ನು ಕ್ಷಮಿಸುವುದಿಲ್ಲ ಎಂದರು.
ವಿಜ್ಞಾನದಲ್ಲಿ ಕುತೂಹಲವು ಬೆರೆತಾಗ ನಿಜವಾದ ಅನ್ವೇಷಣೆ ಮತ್ತು ನಾವಿನ್ಯತೆ ಮಾರ್ಪಾಡಿಸುವುದಕ್ಕೆ ಸಾಧ್ಯ. ವಿದ್ಯಾರ್ಥಿ ಸಮೂಹ ಸೋಲಿನ ಭಯವಿಲ್ಲದೆ ವಿಶಿಷ್ಟ ರೀತಿಯಲ್ಲಿ ನಾವಿನ್ಯತೆಗೆ ಕೊಡುಗೆ ನೀಡಬೇಕಿದೆ. ಪಠ್ಯಕ್ರಮವನ್ನು ವಿದ್ಯಾರ್ಥಿಗಳ ನಾಳಿನ ಭವಿಷ್ಯಕ್ಕಾಗಿ ಕ್ರಿಯಾತ್ಮಕವಾಗಿ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರು ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಪಿ.ಕೃಷ್ಣೇಗೌಡ, ಪ್ರಾಚಾರ್ಯ ಡಾ.ರೇಚಣ್ಣ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಸೌಮ್ಯಾ ಇನ್ನಿತರರಿದ್ದರು.
ಬಳಿಕ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಬೆಂಗಳೂರಿನ ಇಸ್ರೋ ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಆರ್.ಶಶಿಶೇಖರ್‌ಅವರು ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಸವಾಲುಗಳು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಟಿ.ಶಿವಲಿಂಗಸ್ವಾಮಿ ಅವರು ನಕ್ಷತ್ರಗಳ ಜೀವನ ಚಕ್ರ ಕುರಿತು ಉಪನ್ಯಾಸ ಮಾಡಿದರು.
ಮೈವಿವಿ ವಿಜ್ಞಾನ ಭವನದಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಕಾಸ್ಮೋಸ್ ಯೋಜನಾ ಸಹವರ್ತಿ-1 ಆದ ಎನ್‌ಅಮೋಘವರ್ಷ ಅವರು 21 ಶತಮಾನದ ದೂರದರ್ಶಕಗಳು ಕುರಿತು ಮಾತನಾಡಿದರು.