ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾಷಾ ಸೌಹಾರ್ದತಾ ದಿನಾಚರಣೆಯನ್ನು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಉದ್ಘಾಟಿಸಿದರು. ಪ್ರೊ.ಎಸ್.ಕೆ.ನವೀನ್ ಕುಮಾರ್, ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ ಹಾಗೂ ಇತರರು ಇದ್ದರು. 
ಮೈಸೂರು

ಉತ್ತರ ಭಾರತ ರಾಜ್ಯದ ಪಠ್ಯದಲ್ಲಿ ದಕ್ಷಿಣ ಭಾರತದ ಭಾಷೆ ಸೇರ್ಪಡೆಯಾಗಲಿ

ಮೈಸೂರು: ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಕಲಿಯುವ ಮಾದರಿಯಲ್ಲಿಯೇ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳು ದಕ್ಷಿಣ ಭಾರತದ ಭಾಷೆಗಳನ್ನು ಕಲಿಯಬೇಕು ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಭಾಷಾ ಸೌಹಾರ್ದತಾ ದಿನಾಚರಣೆಯಲ್ಲಿ ಮಾತನಾಡಿ, ತ್ರಿಭಾಷಾ ಸೂತ್ರ ಕೇವಲ ದಕ್ಷಿಣ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ತ್ರಿಭಾಷ ಸೂತ್ರವನ್ನು ಉತ್ತರದ ರಾಜ್ಯಗಳು ಸಹ ಅಳವಡಿಸಿಕೊಳ್ಳಬೇಕು. ಆದರೆ, ಉತ್ತರದ ರಾಜ್ಯಗಳು ಹಿಂದಿ, ಇಂಗ್ಲಿಷ್ ದ್ವಿಭಾಷಾ ಸೂತ್ರ ಮಾತ್ರ ಅನುಸರಿಸುತ್ತಿವೆ ಎಂದರು.
ಉತ್ತರ ಭಾರತದ ರಾಜ್ಯಗಳು ಶಿಕ್ಷಣ ನೀತಿಯಲ್ಲಿ ಹಿಂದಿ, ಇಂಗ್ಲಿಷ್ ಜತೆಗೆ ದೇಶದ ಯಾವುದೇ ಭಾಷೆಯನ್ನು ಕಲಿಯಲು ಅವಕಾಶ ನೀಡಬೇಕು. ಇದರಿಂದ ಪರಸ್ಪರ ಗೌರವ ಭಾವ ಮೂಡುತ್ತದೆ. ಅರ್ಥಪೂರ್ಣ ಭಾಷಾ ಕೊಡುಕೊಳ್ವಿಕೆಯಿಂದ ಸೌಹಾರ್ದ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂಗ್ಲಿಷ್ ಕಲಿಯುವ ಭರದಲ್ಲಿ ಮಾತೃಭಾಷೆ ಮರೆಯಬಾರದು. ಇಂಗ್ಲಿಷ್ ಮಾತನಾಡುವ ಅತಿದೊಡ್ಡ ದೇಶವಾಗಿ ಭಾರತ ಹೊರಹೊಮ್ಮಿದೆ. ಇಂಗ್ಲಿಷ್ ಜತೆಗೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಬೇಕು. ದೇಶದ ಬಹುತ್ವ, ಭಾಷಾ ವೈವಿಧ್ಯ ಕಾಪಾಡಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಮಹತ್ವ ನೀಡಿದೆ ಎಂದು ಹೇಳಿದರು.
ನನ್ನ ಮಾತೃಭಾಷೆ ಒಡಿಯಾ ಕನ್ನಡಕ್ಕೆ ಸಾಮ್ಯತೆ ಹೊಂದಿದೆ. ಒಂದು ಭಾಷೆಯನ್ನು ಕಲಿಯುವುದೆಂದರೆ ಜ್ಞಾನವನ್ನು ವಿಸ್ತರಿಸಿಕೊಳ್ಳುವು ದಾಗಿದೆ. ಸಂವಹನ ಮಾತ್ರವಲ್ಲದೇ ಇತಿಹಾಸ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬಹುದು ಎಂದರು.
ನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರೊ.ಕವಿತಾ ರೈ ಕನ್ನಡ, ಪ್ರೊ.ಎಂ.ರಾಮನಾಥಂ ನಾಯ್ಡು ತೆಲುಗು, ಪ್ರೊ.ಶ್ರೀಕಾಂತ್ ಇಂಗ್ಲಿಷ್, ಆನಂದಸಿಂಹ ಸಂಸ್ಕೃತ, ಪ್ರೊ.ಮೊಹಮ್ಮದ್ ನಸ್ರುಲ್ಲಾ ಖಾನ್ ಉರ್ದು, ಪಿ.ಮಣಿ ತಮಿಳು ಕವಿತೆ ವಾಚಿಸಿದರು. ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್ ಇದ್ದರು.