ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಮೈಸೂರು: ಸಾರ್ವಜನಿಕರ ಸಮಸ್ಯೆ ಅಲಿಸಿ ಅಹವಾಲುಗಳನ್ನು ಸ್ವೀಕರಿಸುವುದು ಮಾತ್ರವಲ್ಲ, ಅದಕ್ಕೆ ಪರಿಹಾರ ಕೊಡುವುದಕ್ಕೆ ಕೂಡ ನಾನು ಆದ್ಯತೆ ನೀಡುತ್ತೇನೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದ ಲಕ್ಷ್ಮೀದೇವಿ ಆವರಣ, ಬೆಲವತ್ತ ಗ್ರಾಮದ ಸಮುದಾಯ ಭವನ, ಆಲನಹಳ್ಳಿಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಜನಸಂಪರ್ಕ ಸಭೆಗಳು ಮೂಲಕ ಜನರೊಂದಿಗೆ ನಂಟು ಬೆಳೆಯುವುದಲ್ಲದೆ, ಅವರ ಸಮಸ್ಯೆಗಳನ್ನು ಖುದ್ದಾಗಿ ತಿಳಿಯಲು ಅನುಕೂಲವಾಗಲಿದೆ. ಪ್ರತಿ ಪಂಚಾಯಿತಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಲ್ಲದೆ ಅವುಗಳನ್ನು ತ್ವರಿತವಾಗಿ ಪರಿಹರಿಸಲು ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ರೈಲ್ವೆ, ರಸ್ತೆ ಮತ್ತು ಶಾಲಾ ಅಭಿವೃದ್ಧಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆಗಳ ಬಗ್ಗೆ ನನಗೆ ಅಹವಾಲುಗಳು ಸಲ್ಲಿಕೆಯಾಗಿದೆ. ಅದೆಲ್ಲವನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ದೊರಕಿಸಿಕೊಡಲಾಗಿದೆ ಎಂದು ತಿಳಿಸಿದರು.
ನಾಗರಿಕರು, ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದಾಗಲೂ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಗತ್ಯವಿದ್ದರೆ ನಾನೇ ಇಲಾಖೆ ಅಥವಾ ಕಚೇರಿಗಳಿಗೆ ಭೇಟಿ ನೀಡಿ, ಫಾಲೋಅಪ್ ಮಾಡುತ್ತೇನೆ ಎಂದು ಹೇಳಿದರು.
ಜನರಿಗಾಗಿ ನಮ್ಮ ಪ್ರಧಾನಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಜನರನ್ನು ಸಂಪೂರ್ಣ ನಿರ್ಲಕ್ಷೃಮಾಡುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಇನ್ಮುಂದೆ ಈ ರೀತಿಯ ಜನಸಂಪರ್ಕ ಸಭೆಗಳನ್ನು ಹೆಚ್ಚಾಗಿ ಆಯೋಜಿಸಲಾಗುವುದು. ಮೂಲಕ ಜನರ ಬಳಿಗೆ ಹೋಗಿ ಸಮಸ್ಯೆ ಕೇಳುವುದಲ್ಲದೇ, ಅದನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ನಗರಾಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ರಘು, ರುದ್ರಮೂರ್ತಿ, ಮಂಡಲ ಅಧ್ಯಕ್ಷ ಪೈಲ್ವಾನ್ ರವಿ, ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್‌ಗೌಡ ಇತರರು ಇದ್ದರು.