ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ಮಾಡಿ ಚರ್ಚೆ ನಡೆಸಿದರು.
- ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಪತ್ರ ಸಲ್ಲಿಕೆ
ಮೈಸೂರು: ತಂಬಾಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಹರಾಜು ಕಾರ್ಯ ವಿಧಾನದಲ್ಲಿ ಸುಧಾರಣೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಯದುವೀರ್ ಒಡೆಯರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪ್ರಸಕ್ತ ಋತುವಿನಲ್ಲಿ ಸಮಗ್ರ ಅವಲೋಕನ, ರೈತರು ಎದುರಿಸುತ್ತಿರುವ ಸವಾಲುಗಳಿಗೆ ದೀರ್ಘಾವಧಿಯ ರಚನಾತ್ಮಕ ಪರಿಹಾರ ಒದಗಿಸಲು ತುರ್ತು ಕ್ರಮ, ಏಕಸ್ವಾಮ್ಯ ನಿಯಂತ್ರಣ ತಪ್ಪಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯ: ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಖರೀದಿದಾರರ ವ್ಯಾಪಕ ಭಾಗವಹಿಸುವಿಕೆ ಅನುಮತಿಸುವ ಪ್ರಾಮುಖ್ಯತೆ ಬಗ್ಗೆ ಗಮನ ಸೆಳೆಯಲಾಯಿತು. ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯವಿದೆ. ರೈತರಿಗೆ ಪಾರದರ್ಶಕತೆ, ನ್ಯಾಯಯುತ ಬೆಲೆ ಆವಿಷ್ಕಾರ ಮತ್ತು ಸಂಗ್ರಹಣೆಯಲ್ಲಿ ಸ್ಥಿರತೆ ಖಚಿತಪಡಿಸಿಕೊಳ್ಳಲು ಹರಾಜು ಕಾರ್ಯವಿಧಾನಗಳಲ್ಲಿ ಸುಧಾರಣೆಗಳಿಗೆ ಆದ್ಯತೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಪಿಯೂಷ್ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.
ಅಕ್ರಮ ಸಿಗರೇಟ್ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ರೈತರು ಮತ್ತು ಕಾನೂನುಬದ್ಧ ಉದ್ಯಮದ ಪಾಲುದಾರರನ್ನು ರಕ್ಷಿಸಲು ಕಠಿಣ ನಿಯಂತ್ರಣ ಮತ್ತು ಸುಧಾರಣಾ ಯೋಜನೆ ಜಾರಿಗೊಳಿಸುವಿಕೆ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ರೈತರ ಜೀವನೋಪಾಯವನ್ನು ರಕ್ಷಿಸುವುದು, ಸ್ಥಿರ ಆದಾಯ ಖಚಿತಪಡಿಸುವುದು ಮತ್ತು ಎಲ್ಲ ಸವಾಲುಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗಿದೆ ಎಂದು ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್ ತಿಳಿಸಿದ್ದಾರೆ.
ಕೊಡಗು ಕಾಫಿ ಮಂಡಳಿ ಸಮಸ್ಯೆ ನಿವಾರಣೆಗೆ ಮನವಿ:
2015ರಲ್ಲಿ ಸಾಲ ಮನ್ನಾ ಖಾತ್ರಿಪಡಿಸಿದ ಬಗ್ಗೆ, ಕೊಡಗು ಕಾಫಿ ಸಹಕಾರ ಸಂಘ ಮತ್ತು ಕಾಫಿ ಮಂಡಳಿಯ ನಡುವೆ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಯನ್ನು ಚರ್ಚಿಸಲಾಯಿತು. ನ್ಯಾಯಾಲಯದ ನಿರ್ದೇಶನ ಇರುವುದರಿಂದ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ಇದರಿಂದ ಸಣ್ಣ ಬೆಳೆಗಾರರು ಕೂರ್ಗ್, ಕೊಡಗು ಕಾಫಿ ಬ್ರ್ಯಾಂಡ್ ಅನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಅನುಕೂಲವಾಗುತ್ತದೆ. ಸಹಕಾರ ಸಂಸ್ಥೆಯನ್ನು ಬೆಂಬಲಿಸಲು ಸಕಾಲಿಕ ಕ್ರಮ ಕೈಗೊಳ್ಳಬೇಕೆಂದು ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಲಾಗಿದೆ ಎಂದು ಸಂಸದರು ಹೇಳಿದ್ದಾರೆ.