ಚಾಮುಂಡೇಶ್ವರಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕ ಜಿ.ಟಿ. ದೇವೇಗೌಡ ಹಾಗೂ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಬುಧವಾರ ಸಭೆ ನಡೆಸಿದರು.  
ಮೈಸೂರು

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ : ಶಾಸಕ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ನಿರ್ದೇಶನ

ಸದೇಶ್ ಕಾರ್ಮಾಡ್
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೂಟಗಳ್ಳಿ, ದಾಸನಕೊಪ್ಪಲು, ಆರ್.ಟಿ.ನಗರ, ವಸಂತನಗರ, ನಾಡನಹಳ್ಳಿ, ಸರ್ದಾರ್‌ವಲ್ಲಭವಾಯಿ ಪಟೇಲ್ ನಗರ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಹೂಟಗಳ್ಳಿ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯವರು ನಿರ್ಮಿಸಿರುವ ಟ್ಯಾಂಕ್ ಬಳಕೆಗೆ ಬರುತ್ತಿಲ್ಲ. ಉಂಡವಾಡಿ ಯೋಜನೆಗೆ ಸಂಪರ್ಕ ಕೊಡುವ ತನಕ ಈ ಟ್ಯಾಂಕ್ ಬಳಸಿಕೊಳ್ಳಬಹುದು ಎಂದು ಜಿ.ಟಿ. ದೇವೇಗೌಡರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೂಟಗಳ್ಳಿ ನಗರಸಭೆ ಆಯುಕ್ತ ಬಿ.ಎನ್. ಚಂದ್ರಶೇಖರ್, ಟ್ಯಾಂಕ್ ಬಳಕೆಗೆ ಕೆಐಎಡಿಬಿ ಅವಕಾಶ ನೀಡುತ್ತಿಲ್ಲ ಎಂದರು. ತಕ್ಷಣ ಕೆಐಎಡಿಬಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ವಿವರಿಸಿದ ಜಿ.ಟಿ. ದೇವೇಗೌಡರು, ಟ್ಯಾಂಕ್ ಬಳಕೆಗೆ ಒಪ್ಪಿಗೆ ಸಿಗುವಂತೆ ಮಾಡಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ನೀರಿನ ಟ್ಯಾಂಕ್ ಕೆಐಎಡಿಬಿಗೆ ಅಗತ್ಯವಿರುವಾಗ ಬಳಸಲು ಕೊಡಲಾಗುವುದು. ಈಗ ಬಳಕೆಯಾಗುತ್ತಿಲ್ಲದ ಕಾರಣ ನಾಗರಿಕರ ಅನುಕೂಲಕೋಸ್ಕರ ಬಳಕೆ ಮಾಡೋಣ. ಕುಡಿಯುವ ನೀರಿನ ಸಮಸ್ಯೆ ಪ್ರಸ್ತುತ ಕಾಣಿಸಿಕೊಳ್ಳದೆ ಇದ್ದರೂ ಏಪ್ರಿಲ್ ತಿಂಗಳಿಂದ ಶುರುವಾಗಲಿದೆ. ಕೆಲವು ಬಡಾವಣೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು. ಇದಕೋಸ್ಕರ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದರೆ ಜಿಲ್ಲಾಡಳಿತದಿಂದ ಒಪ್ಪಿಗೆ ನೀಡಲಾಗುವುದು ಎಂದರು.
ವಸಂತನಗರ, ನಾಡನಹಳ್ಳಿಗೆ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳ ಬೇಕಿತ್ತು. ಅಧಿಕಾರಿಗಳು ಸಮಸ್ಯೆ ಬಂದ ಮೇಲೆ ಹೋಗು ವುದು ಬೇಡ. ಜನರಿಂದ ದೂರುಗಳು ಬರುತ್ತಿದ್ದಂತೆ ಪರಿಹರಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಆಸಿಫ್ ಇಕ್ಬಾಲ್ ಖಲೀಲ್ ಮಾತನಾಡಿ, ಅಮೃತ್-2 ಯೋಜನೆಯಡಿ ಕಡಕೊಳಕ್ಕೆ ಕಬಿನಿ ನದಿಯಿಂದ ಐದು ಟಿಎಂಸಿ ನೀರು ಹಂಚಿಕೆಯಾಗಿದೆ. ತಳೂರು ಬಳಿಯಿ ಂದ ಸಂಪರ್ಕ ಕೊಡಲಾಗುತ್ತದೆ. ಅದೇ ರೀತಿ ಸರ್ದಾರ್ ವಲ್ಲಭಬಾಯಿ ಪಟೇಲ್‌ನಗರಕ್ಕೆ ನೀರು ಕೊಡಲು 35 ಕೋಟಿ ರೂ.ವೆಚ್ಚದ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ನಗರಪಾಲಿಕೆ ಮತ್ತು ಎಂಡಿಎ ನಡುವಿನ ಸಹಭಾಗಿತ್ವದಲ್ಲಿ ಕಬಿನಿ ಯೋಜನೆಯನ್ನು ತಂದಿರುವುದರಿಂದ ಎಂಡಿಎ ವ್ಯಾಪ್ತಿಗಳ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಸ್ಥಳೀಯ ಸಂಸ್ಥೆಗಳಿಗೆ ನಿಗದಿಯಾಗಿರುವ ಕೋಟಾ ನೀರನ್ನು ಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕಬಿನಿ ನದಿ ಎರಡನೇ ಹಂತದ ಯೋಜನೆಯಡಿ ಬರುವ 45 ಎಂಎಲ್‌ಡಿ ನೀರಿನಲ್ಲಿ ನಗರಪಾಲಿಕೆಗೆ 30, ಸ್ಥಳೀಯ ಸಂಸ್ಥೆಗಳಿಗೆ 15 ಟಿಎಂಸಿ ಹಂಚಿಕೆಯಾಗಿದೆ. ಇದರಲ್ಲಿ ಹೂಟಗಳ್ಳಿಗೆ 6, ಶ್ರೀರಾಂಪುರಕ್ಕೆ 3,ಬೋಗಾದಿಗೆ 4, ಕಡಕೊಳಕ್ಕೆ 2ಟಿಎಂಸಿ ಹಂಚಿಕೆಯಾಗಿದೆ. ಹೂಟಗಳ್ಳಿಗೆ 6ರ ಬದಲಿಗೆ 4 ಟಿಎಂಸಿ, ಶ್ರೀರಾಂಪುರಕ್ಕೆ 3ರ ಬದಲಿಗೆ 2 ಟಿಎಂಸಿ ಕೊಡಲಾಗುತ್ತಿದೆ. ತಕ್ಷಣವೇ ನಗರಪಾಲಿಕೆ ಅಧಿಕಾರಿಗಳು ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಕೊಡಬೇಕು. ಡಿಯುಡಿಸಿ, ಸ್ಥಳೀಯ ಸಂಸ್ಥೆಗಳು, ನಗರಪಾಲಿಕೆ ಅಧಿಕಾರಿಗಳು ಸಮನ್ವಯತೆಯಿಂದ ಹಂಚಿಕೆ ಮಾಡಿ ನೀರು ಪೂರೈಕೆ ಮಾಡಬೇಕು ಎಂದು ತಾಕೀತು ಮಾಡಿದರು.
ವಸಂತನಗರ ಬಡಾವಣೆಯ ಜನರು ನಗರಪಾಲಿಕೆಗೆ ಪ್ರತಿ ಸಂಪರ್ಕಕ್ಕೆ 30 ಸಾವಿರ ರೂ.ಕಟ್ಟಿರುವುದರಿಂದ ನಾವು ನೀರು ಕೊಡಬೇಕು. ನಗರಪಾಲಿಕೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ರಮ್ಮನಹಳ್ಳಿಗೆ 0.5 ಟಿಎಂಸಿ ಹೆಚ್ಚುವರಿ ನೀರನ್ನು ಬಿಟ್ಟರೆ ವಸಂತನಗರ, ನಾಡನಹಳ್ಳಿ ಸಮಸ್ಯೆ ನಿವಾರಣೆಯಾಗಲಿದೆ. ನಗರಪಾಲಿಕೆ-ಎಂಡಿಎ ನಡುವೆ ಆಗಿರುವ ಒಪ್ಪಂದದಂತೆ ಪಾಲನ್ನು ಕೊಡಲಾಗಿದೆ. ನಗರಪಾಲಿಕೆ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರೂ ಬೇರೆ ಬಡಾವಣೆಗಳಿಗೂ ಕೊಡಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿ.ಪ್ರಿಯದರ್ಶಿನಿ, ನಗರಪಾಲಿಕೆ ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ಕಾರ್ಯಪಾಲಕ ಇಂಜಿನಿಯರ್ ಶಿಲ್ಪಾ ಶರತ್, ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ಶ್ರೀರಾಂಪುರ ಪ.ಪಂ. ಮುಖ್ಯಾಧಿಕಾರಿ ಎಚ್.ಎಂ.ಸುರೇಶ್, ಬೋಗಾದಿ ಪ.ಪಂ. ಮುಖ್ಯಾ ಧಿಕಾರಿ ಮಹೇಶ್, ಇಂಜಿನಿಯರ್ ರಾಮಚಂದ್ರ ಮತ್ತಿತರ ಅಧಿಕಾರಿಗಳು ಹಾಜರಿದ್ದರು.