ಬಸವ ಜಯಂತಿ 
ಮೈಸೂರು

ಜಾತಿಯ ಸಂಕೋಲೆಯಲ್ಲಿ ಸಮಾಜ ಸುಧಾರಕರ ಬಂಧನ

ಸಮಾಜ ಸುಧಾರಕರನ್ನು ಜಾತಿಗೆ ಗುಂಪಿಗೆ ಸೇರಿಸಿ, ಚೌಕಟ್ಟಿನಲ್ಲಿ ಬಂಧಿಸುವಂತಹ ಹುನ್ನಾರ ಮೊದಲಿನಿಂದಲೂ ನಡೆದು ಬಂದಿದ್ದು, ಇದು ಅವರ ತತ್ವ ಸಿದ್ಧಾಂತಕ್ಕೆ ಮಾರಕವಾಗಿದೆ ಎಂದು ಹಿರಿಯ ಸಾಹಿತಿ ಎಸ್.ಶಿವರಾಜಪ್ಪ ಬೇಸರ ವ್ಯಕ್ತಪಡಿಸಿದರು.
ಆಲನಹಳ್ಳಿಯ ಎಸ್‌ಎನ್‌ಎಸ್ ಸ್ಕೂಲ್ ಆವರಣದಲ್ಲಿ ಸುಸಂಘ ಬಸವ ಬಳಗ ವತಿಯಿಂದ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ಪೂಜೆಗೆ ಹೆಚ್ಚು ಮಹತ್ವ ನೀಡುತ್ತಿರುವುದು ದುರದೃಷ್ಟಕರವಾಗಿದೆ ಎಂದರು.
ಬಸವಣ್ಣನಿಗೆ ಪೂಜೆ, ಪುನಸ್ಕಾರ, ಆರಾಧನೆಗಿಂತ, ಅವರ ತತ್ವ ಪ್ರತಿಪಾದನೆ ಸಮಾಜಕ್ಕೆ ಬಹಳ ಮುಖ್ಯವಾದದ್ದು, ಬಸವಣ್ಣ ಬದುಕಿದ್ದಾಗಲೂ ಸಾಕಷ್ಟು ಹಿಂಸೆ ನೀಡಲಾಗಿದೆ. ತದನಂತರವೂ ಅವರ ಕ್ರಾಂತಿಕಾರ ವಿಚಾರಗಳಿಗೆ ತಿಲಾಂಜಲಿ ನೀಡುವ ಹುನ್ನಾರ ಮೊದಲಿನಿಂದಲೂ ನಡೆದು ಬರುತ್ತಿದೆ, ಮೊದಲು ಇದು ನಿಲ್ಲಬೇಕು ಎಂದು ಹೇಳಿದರು.
ಸಮಾಜ ಸುಧಾಕರನ್ನು ಜಾತಿಗಳ ಗುಂಪಿಗೆ ಸೇರಿಸಬಾರದು, ಅವರು ಜಾತಿ ಮೀರಿ ಸಮಾಜಕ್ಕಾಗಿ ಬದುಕಿದ್ದವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದ ಮಹಾನುಭಾವರನ್ನು ಜಾತಿಯ ಸಂಕೋಲೆಯಲ್ಲಿ ಇಂದು ಸಿಲುಕಿಸಿರುವುದು ದುರ್ದೈವದ ಸಂಗತಿಯಾಗಿದೆ. ಜಾತಿಯ ಸಂಕೋಲೆಯನ್ನು ಮೀರಿ ಸೀಮಾತೀತ ವ್ಯಕ್ತಿತ್ವವನ್ನು ಪಡೆದಿರುವ ಅವರ ಆದರ್ಶ, ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಬಸವಣ್ಣನವರು ಸ್ತ್ರೀ ಸಮಾನತೆ, ವೃತ್ತಿ ಸಮಾನತೆಗೆ ಹೆಚ್ಚು ಮಾನ್ಯತೆ ನೀಡಿ ಇವ ನಮ್ಮವ, ಇವ ನಮ್ಮವ ತತ್ವದ ಅಡಿಯಲ್ಲಿ ಮನುಜ ಪಥ ವಿಶ್ವಪಥದ ಎಂದು ಹಾದಿಯನ್ನು ತೋರಿಸಿಕೊಟ್ಟವರು, ಅಂತಹ ಮಹಾತ್ಮನ ಜಯಂತಿ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳು ಪರಿಪಾಲನೆಯಾಗಬೇಕು ಎಂದರು.
ಕುದೇರು ಮಠದ ಪೀಠಾಧಿಪತಿ ಶ್ರೀಗುರುಶಾಂತ ಸ್ವಾಮೀಜಿ ಹಾಗೂ ಕುಂದೂರು ಮಠದ ಡಾ.ಶ್ರೀಶರತ್‌ಚಂದ್ರ ಸ್ವಾಮೀಜಿ ಅವರು
ಬಸವಣ್ಣನವರ ಕಾಯಕ ಸಿದ್ದಾಂತದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ನಾಗಣ್ಣ, ಮಹದೇವಸ್ವಾಮಿ, ರುದ್ರಪ್ಪ ಇದ್ದರು.