ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ 
ಮೈಸೂರು

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬೆಂಗಳೂರಿನಲ್ಲಿ ಬಂಧನ

ಮೈಸೂರು: ಮುಡಾ ಹಗರಣದ ಆರೋಪ ಹೊತ್ತಿರುವ ಹಿಂದಿನ ಆಯುಕ್ತ ಡಿ.ಬಿ.ನಟೇಶ್‌ಗೆ ಬಡ್ತಿ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ 1.60 ಕೋಟಿ ರೂ. ಲಂಚ ನೀಡಿದ ಗಂಭೀರ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿರುವ ಡಿ.ಬಿ.ನಟೇಶ್ ಅವರನ್ನು ಕೆಎಎಸ್ ಆಯ್ಕೆ ಶ್ರೇಣಿಗೆ ಉನ್ನತೀಕರಿಸಿ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಡ್ತಿ ನೀಡಲು ಶಾಲಿನಿ ರಜನೀಶ್ ಕಡೆಯವರಿಗೆ ಡಿ.ಬಿ.ನಟೇಶ್ ಲಂಚ ನೀಡಿದ್ದಾರೆ ಎಂದು ಆರೋಪಿಸಿ ಬುಧವಾರ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ಲಿಖಿತ ದೂರು ನೀಡಿದ್ದರು. ಡಿ.ಬಿ.ನಟೇಶ್ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದರು.
ಮೈಸೂರಿನ ಮನೆ ಮೇಲೆ ದಾಳಿ: ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಬಂಧನಕ್ಕೆ ಒಳಗಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಮೈಸೂರಿನಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಹತ್ತಕ್ಕೂ ಹೆಚ್ಚು ಪೊಲೀಸರು ಗುಂಡೂರಾವ್ ನಗರದಲ್ಲಿರುವ ಸ್ನೇಹಯಿ ಕೃಷ್ಣ ಮನೆಗೆ ಆಗಮಿಸಿ ಸಾಕಷ್ಟು ಹೊತ್ತು ಹುಡುಕಾಟ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದರು. ಗುಂಡೂರಾವ್ ನಗರದ ಮನೆಯಲ್ಲಿ ಶೋಧ ಕಾರ್ಯ ಮುಗಿಸಿದ ನಂತರ ಬಂಡಿಪಾಳ್ಯದಲ್ಲಿರುವ ಮತ್ತೊಂದು ಮನೆಯ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಯಿತು.
ಈ ದಾಳಿಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಸ್ನೇಹಮಯಿ ಕೃಷ್ಣ ಪತ್ನ ವಿನೋದಾ, ಸರ್ಚ್ ವಾರೆಂಟ್ ತೋರಿಸಿ ಪೊಲೀಸರು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಪೆನ್‌ಡ್ರೈವ್, ಸ್ಕಾೃನರ್, ದಾಖಲೆಗಳು, ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ಪಡೆದ್ದಾರೆ. ಕೆಲವು ಮಾಹಿತಿಗಳನ್ನು ಅವರು ಕೇಳಿದ್ದು, ಅವರು ಕೇಳಿದ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ ಎಂದರು.