ಉತ್ತನಹಳ್ಳಿ ಸಮೀಪದ ಖಾಲಿ ನಿವೇಶನದಲ್ಲಿ ಮೈಸೂರು ವೀರಶೈವ ಸಜ್ಜನ ಸಂಘ ಭಾನುವಾರ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರದ ನೀಲಾಕಾಶ ಕ್ಷಣಕಾಲ ಬಣ್ಣಗಳ ಕ್ಯಾನ್ವಾಸ್ ಆಗಿ ಮಾರ್ಪಟ್ಟಿತ್ತು. ಗಾಳಿಯ ಅಲೆಗಳಿಗೆ ತಕ್ಕಂತೆ ನಲಿಯುತ್ತಿದ್ದ ನೂರಾರು ಗಾಳಿಪಟಗಳು ಆಗಸದ ತುಂಬೆಲ್ಲ ವರ್ಣರಂಜಿತ ಚಿತ್ತಾರ ಮೂಡಿಸಿದರೆ, ಮೈದಾನದಲ್ಲಿ ನೆರೆದಿದ್ದ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮುಖದಲ್ಲೂ ಸಂಭ್ರಮದ ನಗು ಅರಳಿತ್ತು. ಬಾಲ್ಯದ ಮಧುರ ನೆನಪುಗಳನ್ನು ಮೆಲುಕು ಹಾಕಿಸುವ ಈ ಗಾಳಿಪಟ ಉತ್ಸವ ನೋಡುಗರ ಮನಸ್ಸಿಗೆ ಹೊಸ ಚೈತನ್ಯ ತುಂಬಿತು.
ನಗರದ ಹೊರವರ್ತುಲ ರಸ್ತೆಯ ಉತ್ತನಹಳ್ಳಿ ಸಮೀಪದ ಖಾಲಿ ನಿವೇಶನದಲ್ಲಿ ಮೈಸೂರು ವೀರಶೈವ ಸಜ್ಜನ ಸಂಘ ಆಯೋಜಿಸಿದ್ದ ಗಾಳಿಪಟ ಉತ್ಸವ ಭಾನುವಾರ ಸಾವಿರಾರು ಕಣ್ಣುಗಳನ್ನು ತನ್ನತ್ತ ಸೆಳೆಯಿತು. ಸಾಮಾನ್ಯ ಗಾಳಿಪಟಗಳ ನಡುವೆ ಮುಗಿಲು ಮುಟ್ಟುವಂತೆ ಮೇಲೇರಿದ ಡ್ರಾೃಗನ್ ಆಕಾರದ ಬೃಹತ್ ಗಾಳಿಪಟ ಎಲ್ಲರ ಗಮನ ಸೆಳೆದರೆ, ಶ್ರೀ ಚಾಮುಂಡೇಶ್ವರಿ ಹಾಗೂ ಯಕ್ಷಗಾನದ ಚಿತ್ರಗಳನ್ನು ಹೊತ್ತ ಕಲಾತ್ಮಕ ಪಟಗಳು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಆಗಸದ ಮೇಲೆಯೇ ಮೂಡಿಸಿದವು.
ಒಂದಕ್ಕಿಂತ ಒಂದು ವಿಭಿನ್ನ ಬಣ್ಣ, ವಿನ್ಯಾಸ ಮತ್ತು ಗಾತ್ರದ ಗಾಳಿಪಟಗಳು ಎತ್ತರಕ್ಕೆ ಹಾರುವ ಪೈಪೋಟಿಯಲ್ಲಿ ತೊಡಗಿದ್ದವು. ಗಾಳಿಯ ಲಯಕ್ಕೆ ತಕ್ಕಂತೆ ನಲಿಯುತ್ತಿದ್ದ ಆ ಪಟಗಳು ಆಕಾಶದಲ್ಲಿ ಚಿತ್ತಾರ ಬಿಡಿಸುತ್ತಿದ್ದ ದೃಶ್ಯವನ್ನು ನೂರಾರು ಜನರು ಕಣ್ತುಂಬಿಕೊಂಡರು. ಮಕ್ಕಳು ಸಂಭ್ರಮದಿಂದ ಓಡಾಡುತ್ತಿದ್ದರೆ, ಯುವಕರು ತಮ್ಮ ಕೌಶಲ್ಯ ಪ್ರದರ್ಶಿಸುತ್ತಿದ್ದರು. ಹಿರಿಯರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತ್ತೆ ಗಾಳಿಪಟದ ದಾರ ಹಿಡಿದಿದ್ದರು.
ಕೆಲವು ಗಾಳಿಪಟಗಳು ಗಾಳಿಯ ವೇಗಕ್ಕೆ ಸಿಲುಕಿ ನೆಲಕ್ಕಿಳಿದರೂ ಸ್ಪರ್ಧಿಗಳ ಉತ್ಸಾಹ ಕಿಂಚಿತ್ತೂ ಕುಗ್ಗಲಿಲ್ಲ. ದಾರವನ್ನು ಬಿಚ್ಚಿ ಸರಿಪಡಿಸಿ, ಗಾಳಿಯ ದಿಕ್ಕು ಅಳೆಯುತ್ತಾ ಮತ್ತೊಮ್ಮೆ ಪಟವನ್ನು ಆಗಸಕ್ಕೇರಿಸುವ ಅವರ ಛಲ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿಯೊಂದು ಯಶಸ್ವಿ ಹಾರಾಟಕ್ಕೂ ಚಪ್ಪಾಳೆಗಳ ಸುರಿಮಳೆಯೇ ಕೇಳಿಬರುತ್ತಿತ್ತು.
ನೂರಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಕಲ್ಪನೆ ಮತ್ತು ಕೈಚಳಕವನ್ನು ಪ್ರದರ್ಶಿಸಿದರು. ಒಂಬತ್ತು ಅಡಿ ಎತ್ತರದ ಬೃಹತ್ ಗಾಳಿಪಟಗಳಿಂದ ಹಿಡಿದು ಕೇವಲ ಎರಡು ಇಂಚಿನ ಪುಟ್ಟ ಗಾಳಿಪಟಗಳವರೆಗೆ ವೈವಿಧ್ಯಮಯ ಪಟಗಳು ಹಾರಾಡಿದವು. ಪಾತರಗಿತ್ತಿ, ಹಾವು, ಡಾಲ್ಫಿನ್, ಡ್ರಾೃಗನ್, ಚೆಂಡು ಹಾಗೂ ಛತ್ರಿಯ ವಿನ್ಯಾಸದ ಪಟಗಳು ಮಕ್ಕಳನ್ನು ರಂಜಿಸಿದವು. ಒಂದೇ ದಾರದಲ್ಲಿ ಜೋಡಿಸಿದ್ದ 150 ಪುಟ್ಟ ಗಾಳಿಪಟಗಳನ್ನು ಒಳಗೊಂಡ ಡ್ರಾೃಗನ್ ವಿನ್ಯಾಸದ ಬೃಹತ್ ಗಾಳಿಪಟ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಕಣ್ಮನ ಸೆಳೆಯಿತು.
ದೇಶಿ ಹಾಗೂ ವಿದೇಶಿ ಸೇರಿ ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಭಾಗವಹಿಸಿದವರು ಗೆಲುವಿಗಿಂತ ಗಾಳಿಪಟ ಹಾರಿಸುವ ಸಂತಸ, ಕುಟುಂಬದೊಂದಿಗೆ ಕಳೆದ ಅಮೂಲ್ಯ ಕ್ಷಣಗಳು ಹಾಗೂ ಬಾಲ್ಯದ ನೆನಪುಗಳನ್ನು ಮತ್ತೆ ಬದುಕಿಸಿದ ಅನುಭವವೇ ದೊಡ್ಡ ಬಹುಮಾನ ಎಂದು ಸಂತಸ ಹಂಚಿಕೊಂಡರು.
ಅತಿ ದೂರ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲೂ ಸಾಕಷ್ಟು ಮಂದಿ ಪಾಲ್ಗೊಂಡಿದ್ದರು. ಹಲವರು ಮನೆಯಿಂದಲೇ ಗಾಳಿಪಟಗಳನ್ನು ತಂದಿದ್ದರೆ, ಕೆಲವರು ಸ್ಥಳದಲ್ಲೇ ಸಿದ್ಧಪಡಿಸಿಕೊಂಡರು. ಉಳಿದವರು ಅಂಗಡಿಗಳಿಂದ ಖರೀದಿಸಿ ತಂದಿದ್ದರು. ವಿವಿಧ ವಿಭಾಗಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಉತ್ಸವದ ಅಂಗವಾಗಿ ನಡೆದ ಕುಟುಂಬ ಮನರಂಜನಾ ಕಾರ್ಯಕ್ರಮಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು. ಪುಣೆ ಇಂಟಿಗ್ರೇಷನ್ಸ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಎಂ. ಪ್ರಜ್ವಲ್ ಪ್ರಸಾದ್, ವಿದುಷಿ ಎಂ. ಮಧುರಾ, ಮೈಸೂರು ವೀರಶೈವ ಸಜ್ಜನ ಸಂಘದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನ್, ಉಪಾಧ್ಯಕ್ಷ ಪಿ.ಎನ್. ದಿನೇಶ್ ಕುಮಾರ್, ಗೌರವ ಕಾರ್ಯದರ್ಶಿ ಕೆ.ವಿ. ಪ್ರದೀಪ್ ಕುಮಾರ್, ಸಹ ಕಾರ್ಯದರ್ಶಿ ಎಂ. ಮನೋಹರ್, ಖಜಾಂಚಿ ಪಿ.ಎಂ. ಸುನೀಲ್ ಹಾಗೂ ಇತರರು ಇದ್ದರು.