‘ಸ್ಕಿಲ್ಸ್ ಡೇ 2026’ ಕಾರ್ಯಕ್ರಮ 
ಮೈಸೂರು

ಮೈಸೂರಿನಲ್ಲಿ ಕ್ಯೂಎಸ್‌ಡಿ ಸ್ಕಿಲ್ಸ್ ಡೇ 2026

ವಿನ್ಯಾಸ, ತಂತ್ರಜ್ಞಾನ ಮತ್ತು ಸೃಜನಶೀಲ ಉದ್ಯಮಶೀಲತೆಯ ಸಂಗಮ

ಮೈಸೂರು: ವಿನ್ಯಾಸ ಮತ್ತು ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷ ಪೂರೈಸಿರುವ ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್ (ಕ್ಯೂಎಸ್‌ಡಿ) ವತಿಯಿಂದ ‘ಸ್ಕಿಲ್ಸ್ ಡೇ 2026’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಕ್ಯೂಎಸ್‌ಡಿ ಕಾಲೇಜು ಆವರಣದಲ್ಲಿ ನಡೆದ ದಿನಪೂರ್ತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ವಿನ್ಯಾಸಕರು, ಉದ್ಯಮಿಗಳು, ಕೈಗಾರಿಕಾ ತಜ್ಞರು ಹಾಗೂ ವಿನ್ಯಾಸಾಸಕ್ತರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಮೂರು ಹೊಸ ಕೋರ್ಸ್‌ಗಳ ಪರಿಚಯ, ಹೊಸ ಉತ್ಪನ್ನ ಬಿಡುಗಡೆ, ಕೌಶಲ್ಯ ಪ್ರದರ್ಶನ, ಯುವ ಆವಿಷ್ಕಾರಕರೊಂದಿಗೆ ಸಂವಾದ ಹಾಗೂ ಫ್ಯಾಷನ್ ಶೋ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದವು.

ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ. ಸುಧನ್ವ, ಕ್ಯೂಎಸ್‌ಡಿ ನಿರ್ದೇಶಕಿ ಹಾಗೂ ಸಲಹೆಗಾರ್ತಿ ಲಾಜವಂತಿ ಸುಧನ್ವ, ಕಲರ್‌ಆಶ್ರಮ ಫೌಂಡೇಶನ್ ಸಹ-ಸಂಸ್ಥಾಪಕಿ ನಮ್ರತಾ ಭುಟೋರಿಯಾ ಹಾಗೂ ಬೆಂಗಳೂರಿನ ಬೋಗನ್‌ವಿಲ್ಲಾ ಬೀಸ್ಪೋಕ್ ಡಿಸೈನ್ ಸ್ಟುಡಿಯೋ ಸಂಸ್ಥಾಪಕಿ ಹಾಗೂ ಪ್ರಧಾನ ವಿನ್ಯಾಸಕಿ ಶಬಾನಾ ಕೌಸರ್ ಕಾರ್ಯಕ್ರಮ ಉದ್ಘಾಟಿಸಿದರು.

ಮೂರು ಹೊಸ ಕೋರ್ಸ್‌ಗಳ ಪರಿಚಯ

ಮೈಸೂರು ಹಾಗೂ ಕರ್ನಾಟಕದ ವಿನ್ಯಾಸ ವಿದ್ಯಾರ್ಥಿಗಳು ಮತ್ತು ಸೃಜನಶೀಲ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಡಿಸೈನ್ ಮತ್ತು ಮಾರ್ಕೆಟಿಂಗ್, ಸಸ್ಟೈನಬಿಲಿಟಿ ಮತ್ತು ಮಾರ್ಕೆಟಿಂಗ್ ಇನ್ ಫ್ಯಾಷನ್ ಹಾಗೂ ಎಐ ಇನ್ ಸ್ಕಿಲ್ ಎಜುಕೇಶನ್ ಎಂಬ ಮೂರು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಯಿತು.

ಡಿಜಿಟಲ್ ಡಿಸೈನ್ ಮತ್ತು ಮಾರ್ಕೆಟಿಂಗ್ ಕೋರ್ಸ್‌ನಲ್ಲಿ ಎಡಿಟೋರಿಯಲ್ ಹಾಗೂ ಪ್ರಿಂಟ್ ಡಿಸೈನ್‌ಗೆ ಒತ್ತು ನೀಡಲಾಗುತ್ತದೆ. ಸಸ್ಟೈನಬಿಲಿಟಿ ಮತ್ತು ಮಾರ್ಕೆಟಿಂಗ್ ಇನ್ ಫ್ಯಾಷನ್ ಕೋರ್ಸ್‌ನಲ್ಲಿ ನೈಸರ್ಗಿಕ ಬಣ್ಣಗಳು, ಜವಳಿ ವಿನ್ಯಾಸ, ಇಕೋ-ಪ್ರಿಂಟಿಂಗ್, ಡ್ರೇಪಿಂಗ್, ಝೀರೋ-ವೇಸ್ಟ್ ಪ್ಯಾಟರ್ನ್ ಮೇಕಿಂಗ್, ಅಪ್‌ಸೈಕ್ಲಿಂಗ್, ತ್ಯಾಜ್ಯ ನಿರ್ವಹಣೆ ಹಾಗೂ ಸರ್ಕ್ಯುಲರ್ ಡಿಸೈನ್ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಎಐ ಇನ್ ಸ್ಕಿಲ್ ಎಜುಕೇಶನ್ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಪ್ರಾಂಪ್ಟ್ ಎಂಜಿನಿಯರಿಂಗ್ ತರಬೇತಿ ನೀಡಲಾಗುತ್ತದೆ. ಕೋರ್ಸ್‌ಗಳು ವಿದ್ಯಾರ್ಥಿಗಳು, ವಿನ್ಯಾಸ ವೃತ್ತಿಪರರು ಹಾಗೂ ವೃತ್ತಿ ಬದಲಾವಣೆ ಬಯಸುವವರಿಗೂ ಮುಕ್ತವಾಗಿವೆ.

‘ಆಲ್‌ದಿವೇ’ ಬ್ರ್ಯಾಂಡ್ ಬಿಡುಗಡೆ

ಕಾರ್ಯಕ್ರಮದಲ್ಲಿ ಮೈಸೂರು ಮೂಲದ ನೂತನ ‘ಆಲ್‌ದಿವೇ’ ಬ್ರ್ಯಾಂಡ್‌ನ್ನು ಸಂಸ್ಥಾಪಕ ಹಾಗೂ ಸಿಇಒ ಸಜಿತ್ ಪ್ರಸಾದ್ ಲೋಕಾರ್ಪಣೆ ಮಾಡಿದರು. ಸಂಸ್ಥೆಯ ಪ್ರಕಾರ, ಇದು ಸರ್ಕ್ಯುಲರ್ ಅಪ್ಯಾರಲ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಬ್ರ್ಯಾಂಡ್ ಆಗಿದ್ದು, ಸಾವಯವ ಹತ್ತಿ, ಸಸ್ಯಜನ್ಯ ಬಣ್ಣಗಳು ಹಾಗೂ ನೈಸರ್ಗಿಕವಾಗಿ ಕೊಳೆಯುವ ವಸ್ತುಗಳನ್ನು ಬಳಸುತ್ತದೆ.

ಪ್ರಸ್ತುತ ತಮಿಳುನಾಡಿನ ಸಿತ್ತಿಲಿಂಗಿ ಕಣಿವೆಯ ಲಂಬಾಣಿ ಕುಶಲಕರ್ಮಿಗಳೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಧರ್ಮಶಾಲಾದ ಕುಶಲಕರ್ಮಿಗಳೊಂದಿಗೆ ಕೆಲಸ ಮಾಡುವ ಉದ್ದೇಶ ಹೊಂದಿದೆ.

ವಿನ್ಯಾಸ, ಉದ್ಯಮಶೀಲತೆ ಕುರಿತು ಸಂವಾದ

ಮಧ್ಯಾಹ್ನ ವಿನ್ಯಾಸ, ಉದ್ಯಮಶೀಲತೆ ಹಾಗೂ ಕೌಶಲ್ಯ ಶಿಕ್ಷಣ ಕ್ಷೇತ್ರದ ಯುವ ಆವಿಷ್ಕಾರಕರು ಮತ್ತು ವೃತ್ತಿಪರರೊಂದಿಗೆ ಸಂವಾದ ಗೋಷ್ಠಿಗಳು ನಡೆದವು.

ವಿಜ್‌ಟೂನ್ಜ್ ಅಕಾಡೆಮಿ ಆಫ್ ಮೀಡಿಯಾ ಆ್ಯಂಡ್ ಡಿಸೈನ್‌ನ ಡಿಸೈನ್ ಉಪನ್ಯಾಸಕ ಕೌಶಲ್ ಗ್ರಾಫಿಕ್ ಡಿಸೈನ್ ಹಾಗೂ ಬ್ರ್ಯಾಂಡಿಂಗ್ ಕುರಿತು ಮಾತನಾಡಿದರು. ಕ್ರಾಫ್ಟ್ ಮೆಲನ್ ಸಂಸ್ಥಾಪಕ ಹಾಗೂ ಸಿಇಒ ಭಾನುಪ್ರಕಾಶ್ ಕಲೆ ಮತ್ತು ವ್ಯವಹಾರ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ನಡುವಿನ ಸಂಬಂಧದ ಕುರಿತು ವಿಚಾರ ಹಂಚಿಕೊಂಡರು. ಕಾಮೆಡ್‌ಕೇರ್ಸ್ ಇನ್ನೋವೇಶನ್ ಹಬ್‌ನ ಮುಖ್ಯ ಕೌಶಲ್ಯ ಬೋಧಕಿ ಚಂದನಾ ಪುತ್ತಣ್ಣ ಕೌಶಲ್ಯ ಶಿಕ್ಷಣದಲ್ಲಿನ ಆವಿಷ್ಕಾರಗಳ ಕುರಿತು ವಿವರಿಸಿದರು.

‘ಡಿಸೈನ್ ಥಿಂಕಿಂಗ್‌ಗೆ ಮಹತ್ವ’

ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ. ಸುಧನ್ವ ಮಾತನಾಡಿ, ಉತ್ಪನ್ನಗಳು, ಪರಿಸರಗಳು ಹಾಗೂ ಅನುಭವಗಳನ್ನು ರೂಪಿಸುವಲ್ಲಿ ಡಿಸೈನ್ ಥಿಂಕಿಂಗ್ ಪ್ರಮುಖ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ವಿನ್ಯಾಸ ಕ್ಷೇತ್ರದ ಕಾರ್ಯವಿಧಾನವನ್ನು ಬದಲಾಯಿಸುತ್ತಿದ್ದು, ಬದಲಾಗುತ್ತಿರುವ ಉದ್ಯಮದ ವೇಗಕ್ಕೆ ತಕ್ಕಂತೆ ವೃತ್ತಿಪರರು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕ್ಯೂಎಸ್‌ಡಿಯಲ್ಲಿ ಹೊಸ ತಂತ್ರಜ್ಞಾನ ಮತ್ತು ಬೆಳವಣಿಗೆಗಳನ್ನು ಕಲಿಕೆಯ ವಾತಾವರಣಕ್ಕೆ ತಂದು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉಪಕರಣ, ಸೌಲಭ್ಯ ಹಾಗೂ ತರಬೇತಿಯನ್ನು ಬಲಪಡಿಸುವುದು ಮತ್ತು ಮೈಸೂರಿನಿಂದ ನುರಿತ ಕಾರ್ಯಪಡೆಯನ್ನು ರೂಪಿಸುವುದು ಉದ್ದೇಶವಾಗಿದೆ ಎಂದು ತಿಳಿಸಿದರು.

ಕ್ಯೂಎಸ್‌ಡಿ ಜನರಲ್ ಮ್ಯಾನೇಜರ್ ಗುರುನಂದನ್ ಜಯರಾಮ್ ಮಾತನಾಡಿ, ಇಂದಿನ ವಿನ್ಯಾಸ ಶಿಕ್ಷಣದಲ್ಲಿ ಸೃಜನಶೀಲತೆಯ ಜತೆಗೆ ಅದನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವೂ ಅಗತ್ಯವಾಗಿದೆ. ಡಿಜಿಟಲ್ ಉಪಕರಣಗಳು, ಪ್ರೋಟೋಟೈಪಿಂಗ್ ಹಾಗೂ ತಂತ್ರಜ್ಞಾನ ಆಧಾರಿತ ಕಾರ್ಯವಿಧಾನಗಳಲ್ಲಿ ಪರಿಣತಿ ಹೊಂದಿರುವ ವೃತ್ತಿಪರರಿಗೆ ಉದ್ಯಮದಲ್ಲಿ ಬೇಡಿಕೆ ಇದೆ. ಹೊಸ ಶೈಕ್ಷಣಿಕ ಉಪಕ್ರಮಗಳ ಮೂಲಕ ಮೈಸೂರಿನಲ್ಲಿ ಬಲಿಷ್ಠ ವಿನ್ಯಾಸ ಪರಿಸರ ವ್ಯವಸ್ಥೆ ನಿರ್ಮಿಸುವ ಉದ್ದೇಶವಿದೆ ಎಂದರು.

6ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ

ಕಳೆದ 30 ವರ್ಷಗಳಲ್ಲಿ ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿನ್ಯಾಸ ಕ್ಷೇತ್ರದಲ್ಲಿ ತರಬೇತಿ ನೀಡಿ ಪ್ರಮಾಣಪತ್ರಗಳನ್ನು ವಿತರಿಸಿದೆ. ತರಬೇತಿ ಪಡೆದ ಹಲವರು ಸ್ವಯಂ ಉದ್ಯೋಗಿಗಳಾಗಿ, ಬೊಟಿಕ್ ಹಾಗೂ ಹೊಲಿಗೆ ಸ್ಟುಡಿಯೋಗಳನ್ನು ಆರಂಭಿಸಿದ್ದು, ಕೆಲವರು ತಮ್ಮದೇ ಡಿಸೈನ್ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇನ್ನು ಕೆಲವರು ಗಾರ್ಮೆಂಟ್ ರಫ್ತು ಘಟಕಗಳು, ಇಂಟೀರಿಯರ್ ಡಿಸೈನ್ ಕಂಪನಿಗಳು ಹಾಗೂ ಡಿಸೈನ್ ಏಜೆನ್ಸಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.