ನಗರದ ಅಮೃತ ವಿಶ್ವವಿದ್ಯಾಪೀಠಂ ವಿದ್ಯಾಸಂಸ್ಥೆಯಲ್ಲಿ ರಸಪ್ರಶ್ನೆ ಸ್ಪರ್ಧಾವಿಜೇತರೊಂದಿಗೆ ಕೆ.ಜಿ.ಮ್ಯಾಥ್ಯೂ, ಪ್ರೊ.ಜಿ.ರವೀಂದ್ರನಾಥ್, ಪ್ರೊ. ಶೇಖರ್ ಬಾಬು, ಡಾ. ರೇಖಾ ಭಟ್ ಇದ್ದರು. 
ಮೈಸೂರು

ಸ್ಕಂದ ಎನ್.ಭಾರದ್ವಾಜ್-ಸಿ.ಸಚಿನ್ ಪ್ರಥಮ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಪಿಯು ವಿದ್ಯಾರ್ಥಿಗಳಿಗೆ ಬ್ರೈನ್ ಬೈಟ್ಸ್ ರಸಪ್ರಶ್ನೆ ಸ್ಪರ್ಧೆ
  • ಅಮೃತ ವಿಶ್ವವಿದ್ಯಾಪೀಠಂ ವಿದ್ಯಾಸಂಸ್ಥೆಯಲ್ಲಿ ಆಯೋಜನೆ
ಮೈಸೂರು: ನಗರದ ಅಮೃತ ವಿಶ್ವವಿದ್ಯಾಪೀಠಂ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ  ಆಯೋಜಿಸಿದ್ದ ‘ಬ್ರೈನ್ ಬೈಟ್ಸ್- 2026 ವಾರ್ಷಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಜ್ಞಾನೋದಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ, ತೃತೀಯ ಸ್ಥಾನ, ವಿಸ್ಡಮ್ ಪಿಯು ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ.
 ಸ್ಪರ್ಧೆಯು ಕಂಟ್ರೋಲ್ ಆ್ಯಂಡ್ ವಿನ್, ರಿಡಲ್ಸ್, ಕನೆಕ್ಟ್ ದ ಡಾಟ್ಸ್, ಬಜರ್, ರಾಪಿಡ್ - ಫೈಯರ್ ಸುತ್ತುಗಳನ್ನು ಒಳಗೊಂಡಿತ್ತು. ಮೈಸೂರು ನಗರದ ಸುತ್ತಮುತ್ತಲಿನ 20 ಕಾಲೇಜುಗಳ 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ತಂಡಗಳಿಗೆ ಟ್ರೋಫಿ, ಸ್ಮರಣಿಕೆ, ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಜ್ಞಾನೋದಯ ಪಿಯು ಕಾಲೇಜಿನ ಸ್ಕಂದ ಎನ್.ಭಾರದ್ವಾಜ್-ಸಿ.ಸಚಿನ್ ಪ್ರಥಮ, ವಿಸ್ಡಮ್ ಪಿಯು ಕಾಲೇಜಿನ ಪಿ.ಸ್ಫೂರ್ತಿ -ಡಿ.ಖುಷಿ ದ್ವಿತೀಯ, ಜ್ಞಾನೋದಯ ಪಿಯು ಕಾಲೇಜಿನ ಎಸ್.ಚಿನ್ಮಯ್- ಎಚ್. ಎಂ.ಅನೀಶ್ ತೃತೀಯ ಸ್ಥಾನ ಪಡೆದರು. ಅಗ್ರ 20 ತಂಡಗಳಿಗೂ ನಗದು ಬಹುಮಾನ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
 ಎಕ್ಸೆಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಕೆ.ಜಿ.ಮ್ಯಾಥ್ಯೂ ಮಾತನಾಡಿ, ರಸಪ್ರಶ್ನೆಗಳು ಕೇವಲ ಜ್ಞಾನವನ್ನು ಪರೀಕ್ಷಿಸುವ ಸ್ಪರ್ಧೆಯಲ್ಲ. ಅದು ವಿದ್ಯಾರ್ಥಿಗಳಲ್ಲಿ ಕುತೂಹಲ, ನೆನಪಿನ ಶಕ್ತಿ, ವಿಮರ್ಶಾತ್ಮಕ ಚಿಂತನೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸ್ಪರ್ಧಾಳುಗಳು ಒಂದು ತಂಡವಾಗಿ ಒಟ್ಟಿಗೆ ಕೆಲಸ ಮಾಡುವ ಕೌಶಲ ಬೆಳೆಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಎಐನಂತಹ ತಂತ್ರಜ್ಞಾದ ಮೇಲೆ ಅತಿಯಾಗಿ ಅವಲಂಬಿತರಾಗಬಾರದು. ತಂತ್ರಜ್ಞಾನದ ಸಹಾಯ ಪಡೆಯುವ ಮೊದಲು ಸ್ವತಃ ಯೋಚಿಸುವುದು, ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದು, ಪುಸ್ತಕ ಓದುವುದು, ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಇಂದಿನ ಶಿಕ್ಷಣದಲ್ಲಿ ಉತ್ತರ ಹುಡುಕುವುದರ ಜತೆಗೆ ಸರಿಯಾದ ಪ್ರಶ್ನೆ ಕೇಳುವುದನ್ನೂ ಕಲಿಯಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಮೌಲ್ಯ, ವ್ಯಕ್ತಿತ್ವ ಬೆಳವಣಿಗೆಯ ಮಹತ್ವವನ್ನು ಒತ್ತಿ ಹೇಳಿದ ಮ್ಯಾಥ್ಯೂ,  ಬುದ್ಧಿವಂತಿಕೆ ಸಾಮರ್ಥ್ಯ ನೀಡುತ್ತದೆ. ಆದರೆ, ಮೌಲ್ಯ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಮಹತ್ವಾಕಾಂಕ್ಷೆಯೊಂದಿಗೆ ಜವಾಬ್ದಾರಿ, ಆತ್ಮವಿಶ್ವಾಸದ ಜತೆಗೆ ವಿನಯವನ್ನೂ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮನ್ನು ನಾವು ಮರು ಶೋಧಿಸಿಕೊಳ್ಳುವುದು ಅತ್ಯಂತ ಮುಖ್ಯ. ಯುವಜನರು ಯೋಚಿಸುವ, ಪ್ರಶ್ನಿಸುವ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
 ಪ್ರಾಂಶುಪಾಲ ಪ್ರೊ.ಜಿ.ರವೀಂದ್ರನಾಥ್, ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಇದ್ದರು.