ಹುಣಸೂರು ನಗರದ 7ನೇ ವಾರ್ಡಿನಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಗರಸಭೆ ಮಾಜಿ ಅಧ್ಯಕ್ಷ ಎಸ್.ಶರವಣ ಅವರಿಗೆ ಎನ್ಯೂಮರೇಶನ್ ಫಾರ್ಮ್ ವಿತರಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್, ಧನಲಕ್ಷ್ಮೀ ಇದ್ದರು.
- ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಹೇಳಿಕೆ
ಹುಣಸೂರು: ನಗರಸಭೆಯ 7ನೇ ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣಾ ನೋಂದಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರ್ಮ್ (ಮತದಾರರ ಗಣತಿ ನಮೂನೆ)ಗಳನ್ನು ವಿತರಿಸಿದರು.
ಶನಿವಾರ ವಾರ್ಡ್‌ನಲ್ಲಿ ವಾಸವಿರುವ ನಗರಸಭೆ ಮಾಜಿ ಅಧ್ಯಕ್ಷ ಎಸ್.ಶರವಣ ಮನೆಗೆ ತೆರಳಿ ನಮೂನೆಯನ್ನು ವಿತರಿಸಿ ಭರ್ತಿ ಮಾಡಿದ ಫಾರ್ಮ್‌ಗಳನ್ನು ಬಿಎಲ್‌ಒಗಳಿಗೆ ನೀಡಲು ಕೋರಿದರು.
ಈ ವೇಳೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌ಐಆರ್ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆದಿವೆ. ಪ್ರತಿದಿನ ಸಂಜೆ ತಮ್ಮ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಿ ಬಿಎಲ್‌ಒಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಸಣ್ಣಪುಟ್ಟ ಲೋಪದೋಷಗಳನ್ನು ನಿವಾರಿಸಲು ಕ್ರಮವಹಿಸಲಾಗಿದೆ. ಕಳೆದೊಂದು ದಿನದಿಂದ ಸರ್ವರ್ ಸಮಸ್ಯೆ ಕಾಡುತ್ತಿತ್ತು. ಇದೀಗ ರಾಜ್ಯಮಟ್ಟದಲ್ಲಿ ಸರಿಪಡಿಸಲಾಗಿದ್ದು, ಸಮೀಕ್ಷಾ ಕಾರ್ಯ ಸುಸೂತ್ರವಾಗಿ ನಡೆದಿದೆ. ಗುಂಪುಗೂಡಿ ಫಾರ್ಮ್‌ಗಳನ್ನು ವಿತರಿಸುವ ಯಾವುದೇ ಪ್ರಕರಣಗಳು ತಾಲೂಕಿನಲ್ಲಿ ಕಂಡುಬಂದಿಲ್ಲ. ಮನೆಮನೆಗೆ ತೆರಳಿ ಫಾರ್ಮ್‌ಗಳನ್ನು ವಿತರಿಸಿ ಅವರಿಗೆ ಎಸ್‌ಐಆರ್‌ನ ಉದ್ದೇಶಗಳನ್ನು ವಿವರಿಸಿ ಬರಬೇಕೆಂದು ಬಿಎಲ್‌ಒಗಳಿಗೆ ಕೋರಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿದ ಪ್ರಕರಣ ಕಂಡುಬಂದಲ್ಲಿ ಸೂಕ್ರ ಕ್ರಮ ಜರುಗಿಸಲಾಗುವುದು ಎಂದರು.
ಸಹಾಯಕ ನೋಂದಣಾಧಿಕಾರಿ ಹಾಗು ತಹಸೀಲ್ದಾರ್ ಜೆ.ಮಂಜುನಾಥ್, ಚುನಾವಣಾ ಶಿರಸ್ತೇದಾರ್ ಪ್ರಕಾಶ್, ಬಿಎಲ್‌ಒ ಧನಲಕ್ಷ್ಮೀ ಇತರ ಸಿಬ್ಬಂದಿ ಹಾಜರಿದ್ದರು.