ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್, ಮುಖಂಡರಾದ ಡಾ.ಎಸ್.ಶ್ರೀಕಾಂತ್, ಹರಿಹರ ಆನಂದಸ್ವಾಮಿ, ವಿಠಲ್ ನಾಣಾಚ್ಚಿ, ಪ್ರೊ.ಎಚ್.ಆರ್.ಸಿದ್ದೇಗೌಡ, ಬಾಲಕೃಷ್ಣ ಇತರರು ಇದ್ದರು.  
ಮೈಸೂರು

ಎಸ್‌ಐಆರ್ ಮ್ಯಾಪಿಂಗ್‌ನಲ್ಲಿ ತಪ್ಪಿಹೋದ ಹೆಸರು

ಎ. ಆರ್. ರಘುರಾಮ
ಹುಣಸೂರು : ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ 15 ಸಾವಿರ ಆದಿವಾಸಿ ಗಿರಿಜನರ ಹೆಸರು ಎಸ್‌ಐಆರ್‌ನ ಮೊದಲ ಹಂತವಾದ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ತಪ್ಪಿಹೋಗಿರುವುದು ಆತಂಕಕಾರಿ ವಿಷಯವೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ತಾಹೇರ್ ಹುಸೇನ್ ಅಭಿಪ್ರಾಯಪಟ್ಟರು.
ನಗರದ ಡೀಡ್ ಸಂಸ್ಥೆಯ ತರಬೇತಿ ಸಭಾಂಗಣದಲ್ಲಿ ಗುರುವಾರ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕುರಿತು ವಿವಿಧ ಸಂಘಟನೆಗಳ ಸದಸ್ಯರು ಮತ್ತು ಆದಿವಾಸಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ದೇಶದ ಪ್ರಜೆಗಳು ನಾವು ಎಂಬುದನ್ನು ಸರ್ಕಾರಿ ಸಿಬ್ಬಂದಿ ಮನೆಯ ಬಾಗಿಲಿಗೆ ಬಂದು, ತಿಳಿದು ಪರಿಶೀಲಿಸಿ
ದೃಢೀಕರಣ ನೀಡಬೇಕು. ಈ ನೆಲದ ಮೂಲ ನಿವಾಸಿಗಳ ಬಗ್ಗೆ ಅಸಡ್ಡೆ ಸಲ್ಲದು ಎಂದರು. ಸರ್ಕಾರ ಆದಿವಾಸಿಗಳ ಬೇಡಿಕೆಗಳನ್ನು ದಶಕಗಳಿಂದ ಈಡೇರಿಸಿಲ್ಲ. ಇದೀತ ಪೌರತ್ವದ ಕುರಿತು ನಿರ್ಲಕ್ಷೃ ಪ್ರದರ್ಶನ ಸರಿಯಲ್ಲ. ಈ ಕುರಿತು ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸುವೆ ಎಂದರು.
ದೊಡ್ಡಆತಂಕ ತಂದಿದೆ:
ಅಧ್ಯಕ್ಷತೆ ವಹಿಸಿದ್ದ ಆದಿವಾಸಿ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ ಮಾತನಾಡಿ, ರಾಜ್ಯದಲ್ಲಿ ಪಶ್ಚಿಮಘಟ್ಟ ಎಲ್ಲೆಯ 9 ಜಿಲ್ಲೆಗಳ 38 ತಾಲೂಕುಗಳ 1,500 ಹಾಡಿ, ಪೋಡುಗಳಲ್ಲಿ, ಅಂಚಿನಲ್ಲಿ ವಾಸಿಸುವ 4ಲಕ್ಷ ಆದಿವಾಸಿಗಳ ಸುಮಾರು 3 ಲಕ್ಷ ಮತದಾರರಲ್ಲಿ 1.20 ಲಕ್ಷ ಮತದಾರರು ಮೊದಲ ಮ್ಯಾಪಿಂಗ್‌ನಲ್ಲಿ ಕೈಬಿಟ್ಟು ಹೋಗಿರುವುದು ದೊಡ್ಡಆತಂಕ ತಂದಿದೆ ಎಂದರು. ಸಂಪನ್ಮೂಲ ವ್ಯಕ್ತಿ ಮೈಸೂರಿನ ಎಚ್,ಆರ್.ರಂಗಪ್ಪ ಮಾತನಾಡಿ, ಹಾಲಿ ಹಾಗೂ ಮಾಜಿ ಸಂಸದರ ಜತೆ ಮಾತನಾಡಿ ಪ್ರತಿಯೊಬ್ಬ ಅರ್ಹ ಆದಿವಾಸಿ ಮತದಾರ ತನ್ನ ಮತಹಕ್ಕು ಉಳಿಸಿಕೊಳ್ಳಲು ನೆರವಾಗುವಂತೆ ಮಾತನಾಡುವೆ ಎಂದು ತಿಳಿಸಿದರು. ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಆತಂಕಗಳನ್ನು ಸ್ಥಳೀಯ ಶಾಸಕರ ಗಮನಕ್ಕೂ ತನ್ನಿ ಎಂದರು.
ಪ್ರಜಾಪ್ರಭುತ್ವದ ಜೀವಾಳ:
ಡೀಡ್ ನಿರ್ದೇಶಕ ಡಾ. ಎಸ್.ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ಮತದಾರನೂ
ಪ್ರಜಾಪ್ರಭುತ್ವದ ಜೀವಾಳ. ಇವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರಗಳ ಪ್ರಾಥಮಿಕ ಕರ್ತವ್ಯ. ಸರ್ಕಾರಗಳು ಜನರಿಗೆ ಉತ್ತರದಾಯಿತ್ವ ಹೊಂದಿರಬೇಕು. ಮತ ಪರಿಷ್ಕರಣೆ ಗೊಂದಲದಿಂದ ಕೂಡಿರಬಾರದು. ಅಧಿಕಾರಿಗಳು ಮುತುವರ್ಜಿ ವಹಿಸಿ ಸುಸೂತ್ರವಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದರು.
ಸಭೆಯಲ್ಲಿ ಆದಿವಾಸಿ ಮುಖಂಡರಾದ ಜೆ.ಡಿ.ಜಯಪ್ಪ, ಕೊವಿಗೆ ಜಯಪ್ಪ, ಬಸವರಾಜು, ಶಿವಣ್ಣ, ವಿಠಲ್‌ನಾಣಚ್ಚಿ, ಲಕ್ಷ್ಮಿ, ಮಾಸ್ತಮ್ಮ ಸೀತೆ, ಅಮ್ಮಣಿ ಸಾಕಮ್ಮ, ಕಲ್ಲೂರಯ್ಯ, ದಲಿತ ಚಳುವಳಿಯ ಮುಖಂಡ ಹರಿಹರ ಆನಂದಸ್ವಾಮಿ, ಪ್ರೊ. ಸಿದ್ದೇಗೌಡರು, ನಿವೃತ್ತ ಅಧಿಕಾರಿಗಳು ಬಾಲಕೃಷ್ಣ, ಆಮ್ ಆದ್ಮಿ ಪಕ್ಷದ ಮೊಯದ್ದೀನ್, ಜಮಾತೆ ಇಸ್ಲಾಮ್‌ನ ಅಬ್ದುಲ್ ಅಜೀಜ್ ಇಮ್ತಿಯಾಜ್, ಹನುಮಯ್ಯ, ಸೋಮನಹಳ್ಳಿ ರುಕ್ಮಿಣಿ, ಸಮಾಜ ಸೇವಾಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಮೋದ್, ಭೈರವ, ಯೋಗೇಶ್, ಎಚ್. ಡಿ. ಕೋಟೆಯ ರಾಜಣ್ಣ, ರಾಜಪ್ಪ, ರವಿ, ಪಿರಿಯಾಪಟ್ಟಣದ ಲಿಂಗಪ್ಪ, ಮಾನವ ಮಂದಿರದ ಮರದೂರು ಶ್ರೀಕಂಠ, ಬೆಂಗಳೂರಿನ ಹರೀಶ್, ಡೀಡ್ ಪ್ರಕಾಶ್, ಶಾರದಾ ಇತರರು ಇದ್ದರು.