ಸರಗೂರು ಪಟ್ಟಣ ಪೋಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ವೃತ್ತ ನಿರೀಕ್ಷಕ ಪ್ರಸನ್ನಕುಮಾರ್ ಮಾತನಾಡಿದರು. ಆರ್ ಕಿರಣ್, ಸರಗೂರು ಕೃಷ್ಣ, ಸಿದ್ದರಾಜು, ವೇಣುಗೋಪಾಲ್ ಇತರರು ಇದ್ದರು. 
ಮೈಸೂರು

ಗಣೇಶೋತ್ಸವ ಆಚರಣೆಗೆ ಸಿಂಗಲ್ ವಿಂಡೋ ವ್ಯವಸ್ಥೆ

ಎಂ.ರವಿ
ಸರಗೂರು: ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳ ಅನುಮತಿ ಪಡೆಯಲು ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ತಾಲೂಕು ಕಚೇರಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಪ್ರಸನ್ನಕುಮಾರ್ ತಿಳಿಸಿದ್ದರು.
ಪಟ್ಟಣದ ಪೋಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜಾ ಕಾರ್ಯಕ್ರಮದ ಶಾಂತಿ ಸಭೆ ನಡೆಸಿ ಮಾತನಾಡಿದರು.
ಆಯೋಜಿಸುವವರು ಒಂದೇ ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ಕಂದಾಯ, ಪೊಲೀಸ್, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಿದ್ದಾರೆ. ಎಲ್ಲವೂ ಸರಿಯಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಎನ್‌ಒಸಿ ಪಡೆದು ಅಂತಿಮವಾಗಿ ಅನುಮತಿ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಗಣೇಶೋತ್ಸವ ಆಯೋಜಕರು ವಿವಿಧ ಇಲಾಖೆಗಳ ಕಚೇರಿಗಳಿಗೆ ತೆರಳಿ ಅನುಮತಿ ಪಡೆಯಲು ಹಲವು ದಿನಗಳ ಕಾಲ ಅಲೆದಾಡಬೇಕಾಗುತ್ತಿತ್ತು. ಇದನ್ನು ಸರಳೀಕರಿಸುವ ನಿಟ್ಟಿನಲ್ಲಿ ಈ ಬಾರಿ ತಾಲೂಕು ಆಡಳಿತದಿಂದ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಗಣೇಶೋತ್ಸವ ಸಮಿತಿಗಳು ಪೂಜೆ ಆರಂಭಿಸುವ ಮುನ್ನ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆದುಕೊಂಡು, ಅನುಮತಿ ಪತ್ರವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುಮತಿಯಿಲ್ಲದೆ ಕಾರ್ಯಕ್ರಮ ನಡೆಸಿ ಕಾನೂನು ತೊಂದರೆಗೆ ಸಿಲುಕಬಾರದು ಎಂದು ಮುನ್ನೆಚ್ಚರಿಕೆ ನೀಡಿದರು.
ಉಪನಿರೀಕ್ಷಕ ಆರ್.ಕಿರಣ್ ಮಾತನಾಡಿ, ಗಣಪತಿ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಅಗತ್ಯವಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಮನವಿ ಮಾಡಿದರು.
ಒಂದು ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೆ, ಇತರ ಪ್ರದೇಶಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗುತ್ತದೆ. ಪ್ರಸ್ತುತ ಸಿಬ್ಬಂದಿ ಮಿತಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಎಲ್ಲೆಡೆ ಸಮರ್ಪಕ ಪೊಲೀಸ್ ಬಂದೋಬಸ್ತ್ ಒದಗಿಸುವುದು ಕಷ್ಟವಾಗುತ್ತಿದೆ. ಸಣ್ಣಪುಟ್ಟ ಘಟನೆಗಳು ನಡೆದಾಗಲೂ ಅಲ್ಲಿ ಯಾಕೆ ಪೊಲೀಸ್ ಇರಲಿಲ್ಲ? ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಲಭ್ಯವಿರುವ ಸಿಬ್ಬಂದಿಯನ್ನು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಡಿಜೆ ಬಳಕೆ ಸಂಪೂರ್ಣ ನಿಷೇಧ: ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಡಿಜೆ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ನಿಷೇಧ ಜಾರಿಯಲ್ಲಿದ್ದು, ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಗಣೇಶೋತ್ಸವವು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ದೇವರ ಪೂಜೆಯ ಸಂದರ್ಭದಲ್ಲಿ ಅಸಭ್ಯ ಅಥವಾ ಅತಿಯಾದ ಶಬ್ದದ ಹಾಡುಗಳು, ನೃತ್ಯ ಕಾರ್ಯಕ್ರಮಗಳು ಹಾಗೂ ಅನಗತ್ಯ ಮನರಂಜನೆಗೆ ಒತ್ತು ನೀಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರಗೂರು ಕೃಷ್ಣ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಿದ್ದರಾಜು, ಎಸ್‌ಸಿ, ಎಸ್‌ಟಿ ಸಮಿತಿ ಸದಸ್ಯ ವೇಣುಗೋಪಾಲ್, ದಸಂಸ ಮುಖಂಡ ಹಳಿಯೂರು ನಾಗಣ್ಣ, ಒಳಮೀಸಲಾತಿ ಹೋರಾಟಗಾರ ಪುಟ್ಟ ಹನುಮಯ್ಯ, ಮೋಹನಕುಮಾರ್ ಎಂ.ಸಿ.ಕೇಂಪನಾಯಕ, ಶಿವಣ್ಣ, ರಘುರಾಮ್, ಸೋಮೇಶ್, ಸಿಬ್ಬಂದಿ ಇಮ್ರಾನ್, ಪುರುಷೋತ್ತಮ್, ಸತೀಶ್, ಆನಂದ, ಶಿವರಾಜು, ಜಗದೀಶ್ ಇದ್ದರು.