ಎಚ್.ವೈ.ಮಹದೇವ್. 
ಮೈಸೂರು

ಬೆಳ್ಳಿರಥ ಸಮರ್ಪಣೆ ನಾಳೆ

ಪ್ರಮುಖ ಮುಖ್ಯಾಂಶಗಳು

  • ಹುಣಸೂರಿನ ಗ್ರಾಮದೇವತೆ ಸನ್ನಿಧಿಯಲ್ಲಿ ಕಾರ್ಯಕ್ರಮ
  • ಸಿಎಂ ಸಿದ್ದರಾಮಯ್ಯ ಭಾಗಿ
ಹುಣಸೂರು: ಹುಣಸೂರು ನಗರದ ಗ್ರಾಮದೇವತೆ, ಶಕ್ತಿಸ್ವರೂಪಿಣಿ ಮುತ್ತು ಮಾರಮ್ಮ ದೇವಾಲಯದ
ಬೆಳ್ಳಿರಥವನ್ನು ಏ.20ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇವೆಗೆ ಸಮರ್ಪಿಸಲಿದ್ದಾರೆಂದು ದೇವಾಲಯ ಸಮಿತಿ ಅಧ್ಯಕ್ಷ ಎಚ್.ವೈ.ಮಹದೇವ್ ತಿಳಿಸಿದರು.
12.5 ಅಡಿ ಎತ್ತರದ ಬೆಳ್ಳಿರಥವನ್ನು ಭಕ್ತರ ಸಹಕಾರ ಮತ್ತು ದೇಣಿಗೆಯಿಂದ ನಿರ್ಮಿಸಲಾಗಿದೆ. ಹುಣಸೂರು ತಾಲೂಕು ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಅಮ್ಮನವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಗರದ ವಿಶ್ವೇಶ್ವರಯ್ಯ ವೃತ್ತದಿಂದ ಮುಖ್ಯಮಂತ್ರಿಗಳನ್ನು ತೆರೆದ ವಾಹನದಲ್ಲಿ ದೇವಾಲಯದ ಆವರಣಕ್ಕೆ ಕರೆತರಲಾಗುವುದು. ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆಗಮಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಅವರು ಕೋರಿದರು.
ಸಮಿತಿ ಉಪಾಧ್ಯಕ್ಷ ಶಿವಯ್ಯ ಮಾತನಾಡಿ, ಅಂದು ದೇವಾಲಯದ 23ನೇ ವಾರ್ಷಿಕೋತ್ಸವವನ್ನೂ ಆಚರಿಸಲಾಗುತ್ತಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಎಚ್.ಆರ್.ಅಶೋಕ್, ಜಂಟಿ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಯೋಗೀಶ್ ಇದ್ದರು.