ತಿ.ನರಸೀಪುರ ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ನಡೆಸುತ್ತಿರುವ ಕಾರ್ಮಿಕರ ಹೋರಾಟಕ್ಕೆ ಚನ್ನಪಟ್ಟಣ ಹಾಗೂ ಮೈಸೂರು ಕೆಎಸ್‌ಐಸಿ ಕಾರ್ಮಿಕರು ಬೆಂಬಲ ಕ್ಷಿೂಚಿಸಿದರು.
ತಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಾರ್ಮಿಕ ಸಂಘಟನೆಗಳು, ಪರಿಸರ ವಾದಿಗಳು ಪಟ್ಟಣದ ಬಂದ್‌ಗೆ ಚಿಂತನೆ ನಡೆಸಿವೆ. ಈ ನಡುವೆ ಬುಧವಾರ ಮೈಸೂರು ಹಾಗೂ ಚನ್ನಪಟ್ಟಣ ಸಿಲ್ಕ್ ಫಿಲೇಚರ್ ಕಾರ್ಖಾನೆ ಕಾರ್ಮಿಕರು ಹೋರಾಟಕ್ಕೆ ಬೆಂಬಲ ನೀಡಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಕೆಎಸ್‌ಐಸಿ ಆವರಣದಲ್ಲಿ 6 ಕೋಟಿ ರೂ.ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲು ಕಂದಾಯ ಇಲಾಖೆ ಭೂಮಿಯನ್ನು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುತ್ತಿದ್ದಂತೆ ಕಾರ್ಮಿಕರು, ಪರಿಸರವಾದಿಗಳು, ಹಲವಾರು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆ ನಡೆಸುತ್ತಿವೆ. ನಾಲ್ಕು ದಿನಗಳಿಂದ ಕಾರ್ಮಿಕರು ಕೆಲಸಕ್ಕೆ ತೆರಳದೆ ಆವರಣದಲ್ಲೇ ಮೌನ ಪ್ರತಿಭಟನೆ ಮಾಡುತ್ತಿದ್ದು ನೂಲು ತೆಗೆಯುವ ಘಟಕ ಸ್ಥಗಿತಗೊಂಡಿದೆ. ಕ್ರೀಡಾಂಗಣ ನಿರ್ಮಿಸಲು ಗುರುತಿಸಿರುವ ಸ್ಥಳ ಸೂಕ್ತವಾಗಿಲ್ಲ. ಆದ್ದರಿಂದ ಈ ಜಾಗವನ್ನು ಬಿಟ್ಟು ಬೇರೆಡೆ ಕ್ರೀಡಾಂಗಣ ನಿರ್ಮಿಸಲಿ ಎಂದು ಪರಿಸರವಾದಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಪರಿಸರ ಬಳಗದ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿ, ಯಾವುದೇ ಕಾರಣಕ್ಕೂ ಇಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಕಾರ್ಮಿಕರೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಹೋರಾಟ ಮಾಡಬೇಕು ಎಂದು ಹೇಳಿದರು.
ಇಲ್ಲಿ ಕ್ರೀಡಾಂಗಣ ನಿರ್ಮಿಸುವುದರಿಂದ ಕಾರ್ಮಿಕರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೈಸೂರು ರೇಷ್ಮೆ ಸೀರೆಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ಈ ಘಟಕ ಮುಚ್ಚುವುದರಿಂದ ನೂರಾರು ಕಾರ್ಮಿಕರ ಭವಿಷ್ಯಕ್ಕೆ ಹೊಡೆತ ಬೀಳಲಿದೆ. ನೂಲಿನ ಉತ್ಪಾದನೆ ನಿಂತರೆ ರೇಷ್ಮೆ ಸೀರೆ ನೇಯ್ಗೆಯ ಮೇಲೆ ತೀವ್ರ ಪರಿಣಾಮವಾಗಿ ರೇಷ್ಮೆ ಸೀರೆ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಹಾಗಾಗಿ ಎಲ್ಲರೂ ಸೇರಿ ಮೈಸೂರು ಮಹಾರಾಜರು ನಿರ್ಮಾಣ ಮಾಡಿರುವ ಈ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದರು.
ಪರಿಸರ ಬಳಗದ ರಾಜ್ಯ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಬಳಗ ಮತ್ತು ಗ್ರಾಹಕ ಪರಿಷತ್ತಿನ ಕಾರ್ಯದರ್ಶಿ ಪ್ರಭಾ ನಂದೀಶ್, ಶೋಭಾ ಶಿವಕುಮಾರ್, ಸುಶೀಲಾ, ಸುಗುಣಾ, ಗಾಯತ್ರಿ, ಗಂಠಯ್ಯ, ಅಕ್ಬರ್, ಶೈಲಜೇಶ್, ಗುರುಸ್ವಾಮಿ, ಭಾನು ಪ್ರಶಾಂತ್, ಮಂಜುಳಾ, ಡಾ.ಮಲ್ಲಿಕಾರ್ಜುನ ಸ್ವಾಮಿ, ತಾಪಂ ಮಾಜಿ ಸದಸ್ಯ ಬಸವರಾಜು ಮತ್ತಿತರರಿದ್ದರು.