ಮುದ್ದುರಾಮ ಪ್ರತಿಷ್ಠಾನದಿಂದ ನಗರದಲ್ಲಿ ಆಯೋಜಿಸಿದ್ದ ಶ್ರೀಸಿದ್ದೇಶ್ವರ ಸ್ವಾಮೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ದಿನಕ್ಕೊಂದು ಚೌಪದಿ-ಮುದ್ದುರಾಮ ಕೃತಿ ಬಿಡುಗಡೆ ಮಾಡಲಾಯಿತು. ಶ್ರೀಮಲ್ಲಯ್ಯ ಸ್ವಾಮೀಜಿ, ಡಾ.ಶ್ರೀಶರತ್‌ಚಂದ್ರ ಸ್ವಾಮೀಜಿ, ಕೆ.ಸಿ.ಶಿವಪ್ಪ, ಡಿ.ಆರ್.ಪಾಟೀಲ ಇತರರಿದ್ದರು.
- ಬೆಳಗಾವಿ ಘೋಡಗೇರಿ ಶಿವಾನಂದ ಮಠದ ಶ್ರೀಮಲ್ಲಯ್ಯ ಸ್ವಾಮೀಜಿ ಬಣ್ಣನೆ
- ಬಾಲ್ಯದಲ್ಲಿಯೇ ಅಧ್ಯಾತ್ಮ, ಧ್ಯಾನ, ಪ್ರಾರ್ಥನೆ ಕಡೆಗೆ ಹೆಚ್ಚಿನ ಒಲವು ಹೊಂದಿದ್ದ ಶ್ರೀಗಳು
ಮೈಸೂರು:ಸಿದ್ದೇಶ್ವರ ಶ್ರೀಗಳ ಜೀವನವೇ ಪ್ರತಿಯೊಬ್ಬರಿಗೂ ಸ್ಫೂರ್ತಿ. ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು ಎಂದು ಬೆಳಗಾವಿ ಘೋಡಗೇರಿ ಶಿವಾನಂದ ಮಠದ ಶ್ರೀಮಲ್ಲಯ್ಯ ಸ್ವಾಮೀಜಿ ಬಣ್ಣಿಸಿದರು.
ಮುದ್ದುರಾಮ ಪ್ರತಿಷ್ಠಾನದಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀಸಿದ್ದೇಶ್ವರ ಸ್ವಾಮೀಜಿ ಸ್ಮರಣಾ ಕಾರ್ಯಕ್ರಮದಲ್ಲಿ ದಿನಕ್ಕೊಂದು ಚೌಪದಿ-ಮುದ್ದುರಾಮ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಬಾಲ್ಯದಲ್ಲಿಯೇ ಅಧ್ಯಾತ್ಮ, ಧ್ಯಾನ, ಪ್ರಾರ್ಥನೆ ಕಡೆಗೆ ಹೆಚ್ಚಿನ ಒಲವು ಹೊಂದಿದ್ದ ಶ್ರೀಗಳು, ಏಕಾಂತ ಪ್ರಿಯರಾಗಿದ್ದರು. ಹೆಚ್ಚು ಅಧ್ಯಾತ್ಮ ಪುಸ್ತಕಗಳ ಓದಿನ ಕಡೆಗೆ ಒಲವು ಹೊಂದಿದ್ದರು. ದೇಹತ್ಯಾಗದ ಕೊನೆ ದಿನಗಳಲ್ಲಿಯೂ ಭಗವದ್ಗೀತೆ, ವಚನ ಸಾಹಿತ್ಯ, ಇತರ ಧಾರ್ಮಿಕ ಪುಸ್ತಕಗಳನ್ನು ಪಠಣ ಮಾಡಿಸುತ್ತಿದ್ದರು ಎಂದು ಹೇಳಿದರು.
ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದಲ್ಲಿ ಮುದ್ದುರಾಮ ಚೌಪದಿಗಳನ್ನು ಬಳಸುತ್ತಿದ್ದರು. ಅಂತಿಮ ದಿನಗಳಲ್ಲಿ ಶ್ರೀಗಳನ್ನು ಕಂಡ ಕೆ.ಸಿ.ಶಿವಪ್ಪ, ಮಗುವಿನಂತೆ ಅಳುತ್ತಿದ್ದರು. ಇಬ್ಬರ ನಡುವೆ ಅಂತಹ ಬಾಂಧವ್ಯ ಇತ್ತು ಎಂದರು.
ಜೀವನದ ಸತ್ಯ ಘಟನೆಗಳನ್ನು ಉಲ್ಲೇಖಿಸಿ ಪ್ರವಚನಗಳನ್ನು ನೀಡುತ್ತಿದ್ದರು. ಅವರ ಬದುಕು ತೆರೆದಿಟ್ಟ ಜೀವನ, ಇತರಿಗೆ ಮಾದರಿ, ಜತೆಗೆ ಅಮೂಲ್ಯವಾದ ಪುಸ್ತಕವೂ ಹೌದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮದ ಮೇರು ಪರ್ವತ, ಸದ್ಗುಣಗಳ ಪ್ರತಿರೂಪ. ಅವರ ಪ್ರವಚನಗಳಿಗೆ ಜನರ ಮನಸ್ಸನ್ನೇ ಪರಿವರ್ತಿಸುವ ಶಕ್ತಿ, ದುಶ್ಚಟಗಳನ್ನು ದೂರವಾಗಿಸುವ ಮಾಂತ್ರಿಕತೆ ಇತ್ತು ಎಂದರು.
ಭಕ್ತರು ಶ್ರೀಗಳನ್ನು ನಡೆದಾಡುವ ದೇವರೆಂದೇ ಭಾವಿಸಿದ್ದರು. ಆದರೆ ನಿಜ ಬದುಕಿನಲ್ಲಿ ಪುಸ್ತಕಗಳ ಅಧ್ಯಯನಗಳಿಂದ ದೈವತ್ವ ಸಂಪಾದಿಸಿದ್ದರು ಎಂದರು.
ಕುಂದೂರು ಮಠದ ಡಾ. ಶ್ರೀಶರತ್‌ಚಂದ್ರ ಸ್ವಾಮೀಜಿ, ಮುದ್ದುರಾಮ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ, ನಿವೃತ್ತ ಪ್ರಾಧ್ಯಾಪಕ ನೀಲಗಿರಿ ತಳವಾರ್, ಹರ್ಷವರ್ಧನ ಇತರರು ಇದ್ದರು.