ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಡುವಿನ ಮುನಿಸು ಇನ್ನೂ ಶಮನವಾಗಿಲ್ಲವೇ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಮ್ಮ ನಿವಾಸದಲ್ಲಿ ನಡೆದ ಬೆಳಗಿನ ಉಪಾಹಾರ ಕೂಟಕ್ಕೆ ಆಗಮಿಸಿದ್ದವರ ಬಗ್ಗೆ ಮಾಹಿತಿ ನೀಡುವಾಗ ಹಲವರ ಹೆಸರುಗಳನ್ನು ಪ್ರಸ್ತಾಪಿಸಿದರೂ ಮಹದೇವಪ್ಪ ಅವರ ಹೆಸರನ್ನು ಉಲ್ಲೇಖಿಸದೆ ಇರುವುದು ಗಮನ ಸೆಳೆಯಿತು.
ಹರಿಪ್ರಸಾದ್, ನರೇಂದ್ರಸ್ವಾಮಿ, ಜಮೀರ್ ಅಹಮದ್, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವರು ಬೆಳಗಿನ ಉಪಾಹಾರಕ್ಕೆ ಆಗಮಿಸಿದ್ದರು. ಅವರೆಲ್ಲರೂ ಹೊರ ಜಿಲ್ಲೆಗಳವರಾಗಿದ್ದರಿಂದ ಉಪಾಹಾರಕ್ಕೆ ಆಹ್ವಾನಿಸಿದ್ದೆ, ಹೀಗಾಗಿ ಬಂದಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ಅವರು ಮಹದೇವಪ್ಪ ಅವರ ಹೆಸರನ್ನೂ ಹೇಳುವಂತೆ ಸೂಚಿಸಿದರೂ ಸಿದ್ದರಾಮಯ್ಯ ಅದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಮುಂದುವರಿದರು. ಮಾಧ್ಯಮದವರು ಮತ್ತೆ ಮತ್ತೆ ಮಹದೇವಪ್ಪ ಅವರ ಬಗ್ಗೆ ಪ್ರಶ್ನಿಸಿದರೂ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ.
'ಅವರು ಮೈಸೂರು ಜಿಲ್ಲೆಯ ಶಾಸಕರು ತಾನೇ, ಅದಕ್ಕೆ ಬಂದಿದ್ದರು' ಎಂಬಷ್ಟೇ ಹೇಳಿ ಅಲ್ಲಿಂದ ತೆರಳಿದರು.
ಸಿದ್ದರಾಮಯ್ಯ ಅವರು ಉಪಾಹಾರ ಕೂಟಕ್ಕೆ ಬಂದವರ ಪಟ್ಟಿಯಲ್ಲಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿದರೂ ಮಹದೇವಪ್ಪ ಅವರ ಹೆಸರನ್ನು ಹೇಳದಿರುವುದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಇಬ್ಬರ ನಡುವಿನ ಅಸಮಾಧಾನ ಇನ್ನೂ ಮುಂದುವರಿದಿದೆಯೇ ಎಂಬ ಕುತೂಹಲವೂ ಮೂಡಿದೆ.