ಸಚಿವ ಜಮೀರ್ ಅಹ್ಮದ್ ಖಾನ್ 
ಮೈಸೂರು

ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ : ಜಮೀರ್ ಅಹಮದ್ ಖಾನ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ, ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು. ಹೈಕಮಾಂಡ್ ಬಿಟ್ಟು ಬೇರೆ ಯಾರ ಕೈಯಲ್ಲೂ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ 2028ರವರೆಗೂ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕುಳಿತಿದ್ದಾರೆ, ಅವರು ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಸಿದ್ದರಾಮಯ್ಯ ಅವರೇ ಅದನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಅಂತಿಮ ತೀರ್ಮಾನ ಏನಿದ್ದರೂ ಹೈಕಮಾಂಡ್‌ಗೆ ಬಿಟ್ಟದ್ದು. ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಇಲಾಖೆಯ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹೈಕಮಾಂಡ್‌ಅನ್ನು ಅವರು ಭೇಟಿಯಾಗಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಾಕಷ್ಟು ಶಾಸಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅಂತಿಮವಾಗಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಆಗುವಂತಹ ಸನ್ನಿವೇಶಗಳು ಇಲ್ಲ ಎಂದು ಹೇಳಿದರು.
ನನ್ನ ಆಪ್ತ ಸಹಾಯಕ ಸರ್ಫರಾಜ್ ಖಾನ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿರುವ ವಿಚಾರದ ಕುರಿತು ಮಾಹಿತಿ ಇಲ್ಲ. ಸರ್ಫರಾಜ್ ಖಾನ್ ಅವರ ತಂದೆ ಕಾಲದಿಂದಲೂ ಶ್ರೀಮಂತರು. ಯಾವ ಕಾರಣಕ್ಕೆ ದಾಳಿ ಆಗಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ದ್ವೇಷ ಭಾಷಣ ತಡೆ ಕಾಯ್ದೆ ಒಂದು ಸಮುದಾಯ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮದವರಿಗೂ ಅನ್ವಯ ಆಗುತ್ತದೆ. ಬಹಳ ಜನರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ನಾಲಿಗೆ ಮೇಲೆ ಕಂಟ್ರೋಲ್ ಇರುವುದಿಲ್ಲ. ನಾಲಿಗೆ ಜಾಸ್ತಿ ಉದ್ದ ಇರೋದು ಬಿಜೆಪಿಯವರಿಗೆ ಅಲ್ವ? ಈ ಮಸೂದೆಯನ್ನು ವಿರೋಧಿಸಿ ಬಿಜೆಪಿ ಸಣ್ಣ ಆಗಿದೆ ಎಂದು ಟೀಕಿಸಿದರು.