ಮೈಸೂರು: ಸಿದ್ದರಾಮಯ್ಯ ಅವರೇ 2028ರವರೆಗೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಡಿ.ಕೆ.ಶಿವಕುಮಾರ್ ದೆಹಲಿ ಪ್ರಯಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಿದ್ದಾರೆ. ಅಸ್ಸಾಂ ಚುನಾವಣೆಯ ವೀಕ್ಷಕರಾಗಿದ್ದಾರೆ. ಹೀಗಾಗಿ ದೆಹಲಿಗೆ ಹೋಗಿದ್ದಾರೆ. ಇದಕ್ಕೆ ಯಾವ ವಿಶೇಷ ಅರ್ಥಗಳು ಬೇಡ ಎಂದರು.
2028ರವರೆಗೆ ಸಿದ್ದರಾಮಯ್ಯ ಸಿಎಂ ಆಗಿ ಇರುತ್ತಾರೆ. ಬಿಜೆಪಿಯವರು ಸುಮ್ಮನೆ ಏನೋ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಬಿಜೆಪಿ ಯಾವಾಗಲೂ ಪರಿಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಇಂತಹ ಸಂದರ್ಭಗಳನ್ನು ಅವರು ಕಾಯುತ್ತಿರುತ್ತಾರೆ. ನಂತರ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂದುಕೊಂಡು ಹೋಗುತ್ತಾರೆ. ಇದು ಕೂಡ ಅಷ್ಟೇ ಎಂದು ಕುಟುಕಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದಿನ ಚುನಾವಣೆಗಳಲ್ಲಿ ಅನಧಿಕೃತ ಹೊಂದಾಣಿಕೆಯಲ್ಲಿದ್ದರು. ಈಗಿನ ಚುನಾವಣೆಯಲ್ಲಿ ಅಧಿಕೃತ ಹೊಂದಾಣಿಕೆಯಲ್ಲಿದ್ದಾರೆ. ಇದರಲ್ಲಿ ಬೇರೆ ತ್ಯತ್ಯಾಸಗಳು ಇಲ್ಲ. ಕಾಂಗ್ರೆಸ್ ಮೇಲೆ ಇದು ಯಾವ ಪರಿಣಾಮ ಬೀರುವುದಿಲ್ಲ ಎಂದರು.
ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನಾ ಸಮಾವೇಶ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಇಬ್ಬರು ಪ್ರತಿನಿಧಿಗಳ ನಡುವೆ ನಡೆದ ವಾಗ್ವಾದ. ಜನಪ್ರತಿನಿಧಿಯಾದವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಮ್ಮಿಂದಲೇ ಜನರಿಗೆ ತೊಂದರೆ, ಕಾನೂನುಭಂಗ ಆಗಬಾರದು. ಅದನ್ನು ಬಿಟ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಆಗ ಸರ್ಕಾರದ ಆಸ್ತಿ ನಷ್ಟ ಆಗುತ್ತದೆ, ಅಮಾಯಕರ ಪ್ರಾಣ ಹೋಗುತ್ತದೆ. ಹಿಂದೆ ಬಳ್ಳಾರಿ ಹೇಗೆ ರಿಪಬ್ಲಿಕ್ ಆಗಿತ್ತು ಎಂದು ಎಲ್ಲರಿಗೂ ಗೊತ್ತು. ಬಳ್ಳಾರಿ ಸಂಪತ್ತು ಲೂಟಿ ಮಾಡಿಕೊಂಡವರೇ ಬಂದು ಸಮಾವೇಶ ಮಾಡುತ್ತಿರೋದು ಹಾಸ್ಯಾಸ್ಪದ ಎಂದು ಜರಿದರು.