ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ  
ಮೈಸೂರು

ಸಿದ್ದರಾಮಯ್ಯ ಅವರೇ ವಚನಭ್ರಷ್ಟರಾಗಬೇಡಿ: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಡಿಕೆಶಿಗೆ ಅಧಿಕಾರ ಹಸ್ತಾಂತರಿಸದಿದ್ದರೆ ಕಾಂಗ್ರೆಸ್ ಧೂಳಿಪಟ
  • ಐಎಸಿಸಿ ಅಧ್ಯಕ್ಷರ ಸಮಕ್ಷಮದಲ್ಲೇ ಆಣೆ ಪ್ರಮಾಣ
  • ರಾಜಕೀಯ ಮೇಲಾಟದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಷ್ಕ್ರಿಯ
  • ಅತಿಯಾದ ತೆರಿಗೆಯಿಂದ ದುಬಾರಿಯಾಗಿರುವ ಬಿಯರ್ ಸೇರಿದಂತೆ ಮದ್ಯ ಕುಡಿಯಲು ಯುವಜನರ ಬಳಿ ದುಡ್ಡಿಲ್ಲ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕಾರ ಹಸ್ತಾಂತರ ಮಾಡದೆ ವಚನಭ್ರಷ್ಟರಾಗಬೇಡಿ. ಹೀಗೆ ಮಾಡಿದವರು ಯಾರೂ ಉಳಿದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಗುಡುಗಿದರು.
ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದ ಎಚ್.ಡಿ.ಕುಮಾರಸ್ವಾಮಿ ಗತಿ ಏನಾಯಿತು? ಕಾಂಗ್ರೆಸ್‌ಗೆ ದ್ರೋಹ ಮಾಡುವುದು ಒಳ್ಳೆಯದಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಎಂ ವಿರುದ್ಧ ಹರಿಹಾಯ್ದರು.
ಈ ವಿಚಾರದಲ್ಲಿ ಸಿದ್ದರಾಮಯ್ಯ ಐಎಸಿಸಿ ಅಧ್ಯಕ್ಷರ ಸಮಕ್ಷಮದಲ್ಲೇ ಆಣೆ ಪ್ರಮಾಣ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸಹೋದರರ ಸಮ್ಮುಖದಲ್ಲಿ ವಚನ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು ಉಪಸ್ಥಿತರಿದ್ದರು. ಆದರೀಗ ಈ ಬಗ್ಗೆ ಯಾರೊಬ್ಬರೂ ಬಾಯಿಬಿಡುತ್ತಿಲ್ಲ. ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗುವುದು ನಿಶ್ಚಿತ ಎಂದು ಹೇಳಿದರು.
ರಾಜಕೀಯ ಮೇಲಾಟದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಷ್ಕ್ರಿಯವಾಗಿವೆ. ಇಡೀ ಆಡಳಿತವೇ ಅವಕೃಪೆಗೆ ಗುರಿಯಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏನಾಗಿದೆ ಎಂಬುದನ್ನು ಹೇಳದೆ ಸುಮ್ಮನಿರುವುದು ಸರಿಯಲ್ಲ. ತಕ್ಷಣ ಮಧ್ಯೆ ಪ್ರವೇಶಿಸಬೇಕು. ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಡುವುದರಲ್ಲಿ ತಪ್ಪಿಲ್ಲ ಎಂದರು.
ಪುಣ್ಯಕೋಟಿ ಪದ್ಯವನ್ನು ಉಲ್ಲೇಖಿಸಿದ ಎಚ್.ವಿಶ್ವನಾಥ್ ಅವರು, ವ್ಯಾಘ್ರಕ್ಕೆ ಮಾತು ಕೊಟ್ಟ ಹಸು ನುಡಿದಂತೆ ನಡೆದುಕೊಂಡ ನಾಡು ನಮ್ಮದು. ನಾವು ಕುರುಬ ಸಮಾಜದವರು. ಹಾಲು ಕೆಟ್ಟರೂ ಕುರುಬ ಸಮುದಾಯ ಕೆಡಲ್ಲ. ಕುರುಬರು ಕೊಟ್ಟ ಮಾತಿಗೆ ತಪ್ಪಿಯೂ ನಡೆದಿಲ್ಲ. ಸಿದ್ದರಾಮಯ್ಯ ಕುರುಬ ಸಮಾಜದ ಹೆಸರನ್ನು ಕೂಡ ಹಾಳು ಮಾಡ್ತಿದ್ದಾರೆ. ಕುರುಬರಿಗೆ ಏನನ್ನೂ ಮಾಡದ ಇವರು ಎಲ್ಲ ಮಾಡಿದ್ದು ನಾನೇ ಎನ್ನುತ್ತಿರುವುದು ದುರಾಹಂಕಾರ ಎಂದು ಹರಿಹಾಯ್ದರು.
ಜೆಡಿಎಸ್‌ನಿಂದ ಸಿದ್ದರಾಮಯ್ಯರನ್ನು ಹೊರಹಾಕಿದಾಗ ಆಶ್ರಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೀಗ ಆ ಪಕ್ಷವನ್ನೇ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಆ ಪಕ್ಷಕ್ಕೆ ಬಾಗಿಲು ಹಾಕಿ ಹೊರಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಬದುಕಬೇಕು. ಜನಾದೇಶ ಕೊಟ್ಟಿರುವುದು ಕಾಂಗ್ರೆಸ್‌ಗೆ. ಸಿದ್ದರಾಮಯ್ಯಗೆ ಅಲ್ಲ ಎಂದು ಗುಡುಗಿದರು.
ಗುಂಡಿ ಬಿದ್ದು ಹೋಗಿರುವ ರಾಜ್ಯದ ಭಂಡ ನಾಯಕ ಸಿದ್ದರಾಮಯ್ಯ. ರಾಜ್ಯಾದ್ಯಂತ ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಸಿದ್ದರಾಮಯ್ಯ ಬರೀ ಬೊಗಳೆ ಹೊಡೆದುಕೊಂಡು ಓಡಾಡ್ತಿದ್ದಾರೆ. ಇವರು ಅತಿ ಹೆಚ್ಚು ಸಾಲ ಮಾಡಿ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಸಾಲ ತೆಗೆದುಕೊಂಡು ಬಂದು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ವಿಧಿಸಿರುವ ಅತಿಯಾದ ತೆರಿಗೆಯಿಂದ ದುಬಾರಿಯಾಗಿರುವ ಬಿಯರ್ ಸೇರಿದಂತೆ ಮದ್ಯ ಕುಡಿಯಲು ಯುವಜನರ ಬಳಿ ದುಡ್ಡಿಲ್ಲ. ಹೀಗಾಗಿ, ಅವರೆಲ್ಲ ಗಾಂಜಾ ಸೇವನೆ ಮಾಡುವ ಮೂಲಕ ಹಾಳಾಗುತ್ತಿದ್ದಾರೆ ಎಂದು ದೂರಿದರು.
‘ಸಿದ್ದರಾಮಯ್ಯ ಇಲ್ಲ ಎಂದಿದ್ದರೆ ಕಾಂಗ್ರೆಸ್ ಪಕ್ಷವೇ ಇರಲ್ಲ’ ಎಂದಿರುವ ಕೆ.ಎನ್.ರಾಜಣ್ಣ ವಿರುದ್ಧ ಕಿಡಿಕಾರಿದ ವಿಶ್ವನಾಥ್ ಅವರು, ಜೆಡಿಎಸ್‌ನಿಂದ ಹೊರಹಾಕಿದಾಗ ಎಲ್ಲೋ ಬಿದ್ದಿದ್ದವರಿಗೆ ಕಾಂಗ್ರೆಸ್ ಆಶ್ರಯ ಕೊಟ್ಟಿದೆ. ಅದೇ ಪಕ್ಷದ ವಿರುದ್ಧ ಅವರು ಈಗ ಮಾತನಾಡುತ್ತಾರೆ ಎಂದು ಹರಿಹಾಯ್ದರು.