ಮೈಸೂರು: ಈ ವೇಳೆ ಅಧಿಕಾರ ಹಂಚಿಕೆ ಮಾತು ಸರಿಯಲ್ಲ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಬೇಕೆಂಬುದು ರಾಜ್ಯ ಕಾಯಕ ಸಮುದಾಯಗಳ ಆಶಯವಾಗಿದೆ ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಹೇಳಿದರು.
ಹಿಂದುಳಿದ ಸಮುದಾಯದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೇರೆ ಸಮರ್ಥ ನಾಯಕರು ಬೆಳೆದಿಲ್ಲ. ಹೀಗಾಗಿ ಇವರೊಬ್ಬರು ಮಾತ್ರವೇ ಈ ಸಮುದಾಯಗಳನ್ನು ಪ್ರತಿನಿಧಿಸುವವರಾಗಿದ್ದು, ಸಾಮಾಜಿಕ ನ್ಯಾಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಢ ನಂಬಿಕೆ ವಿರುದ್ಧ ಹೋರಾಟ ಸಹ ಮಾಡುತ್ತಿರುವುದಕ್ಕೆ ಅವರ ಚಾಮರಾಜನಗರ ಭೇಟಿಯೇ ಸಾಕ್ಷಿ. ದೇವರಾಜ ಅರಸರ ಕಾಲಘಟ್ಟ ಬೇರೆ, ಸಿದ್ದರಾಮಯ್ಯ ಅವರ ಕಾಲಘಟ್ಟ, ಪರಿಸ್ಥಿತಿಯೇ ಬೇರೆ. ಹೀಗಾಗಿ ಈಗಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ರಾಜ್ಯ ರಾಜಕಾರಣ, ಸಮುದಾಯಗಳ ದೃಷ್ಟಿಯಿಂದ ಅಗತ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ, ಮುಂಬರುವ ಬಜೆಟ್ ವೇಳೆ ಸಿದ್ದರಾಮಯ್ಯ ಅವರು ಕಾಯಕ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ, ಮಂಡಳಿಗಳನ್ನು ರದ್ದುಗೊಳಿಸಿ ಕಾಯಕ ಸಮಾಜಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು. ಈ ಬಜೆಟ್‌ನಲ್ಲಿ ಇದಕ್ಕೆ ಸಾವಿರ ಕೋಟಿ ರೂ. ಅನುದಾನ ತೆಗೆದಿಡಬೇಕು. ಪ್ರತಿ ತಾಲೂಕಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ತೆರೆಯಬೇಕು, ಈಗಿರುವ ಶೇ.15 ಮೀಸಲಾತಿಯನ್ನು ಶೇ.27ಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಿದರು.