ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಿದ್ದರ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ (ಸಿದ್ದರಾಮಯ್ಯ) 14 ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಶಿಫಾರಸು ಮಾಡಿದ್ದರು, ಅದರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಿದ್ದರಾಮಯ್ಯ ಅವರ ಶಿಫಾರಸಿನಂತೆ ಎರಡು ಹಂತದ ಪಟ್ಟಿಯಲ್ಲೂ ಮಹದೇವಪ್ಪ ಹೆಸರಿತ್ತು. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಕೇಳಿದ್ದರು. ಆದರೆ, ಹೈಕಮಾಂಡ್ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಲು ಒಪ್ಪಲಿಲ್ಲ. ತನ್ವೀರ್ ಸೇಠ್ ಹಾಗೂ ಮಹದೇವಪ್ಪ ಅವರು ಸಾಕಷ್ಟು ಹಿರಿಯರು ಇದ್ದಾರೆ. ಅವರಿಗೆ ಪರಿಸ್ಥಿತಿಯ ಅರಿವು ಇದೆ. ಹೀಗಿದ್ದರೂ ಅವರನ್ನು ಭೇಟಿಯಾಗಿ ಸಚಿವ ಸ್ಥಾನ ಕೈತಪ್ಪಿದ್ದರ ವಿಚಾರವಾಗಿ ಮಾತುಕತೆ ನಡೆಸುತ್ತೇನೆ ಎಂದರು.
ಜಮೀರ್ ಅಹಮದ್ ಅವರಿಗೆ ನಮ್ಮ ತಂದೆ ಸಚಿವ ಸ್ಥಾನ ಕೇಳಿರಲಿಲ್ಲ. ಗಾಯತ್ರಿ ಅವರು ಸಚಿವರಾಗದ ವಿಚಾರದಲ್ಲಿ ನಮ್ಮ ತಂದೆಯ ಪಾತ್ರ ಇಲ್ಲ. ಅದೇ ರೀತಿ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಿದ್ದರ ಹಿಂದೆಯೂ ನಮ್ಮ ತಂದೆಯ ಪಾತ್ರ ಇಲ್ಲ. ಈ ಸಚಿವ ಸಂಪುಟದ ಬಗ್ಗೆ ನಮ್ಮ ತಂದೆಗೆ ಯಾವ ಅಸಮಾಧಾನವೂ ಇಲ್ಲ. ಆ.3 ರಂದು ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಅವರು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕೆಲವು ಬಾರಿ ಕೆಲವು ಜಾತಿಗಳಿಗೆ ಪ್ರಾತಿನಿಧ್ಯ ದೊರೆಯುವುದಿಲ್ಲ. ಅದನ್ನು ಬೇರೆ ರೀತಿಯಲ್ಲಿ ಪಕ್ಷ ಸರಿದೂಗಿಸುತ್ತದೆ. ನಮ್ಮ ತಂದೆ ಅರ್ಧಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿದ ಕಾರಣ ನನಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಸಚಿವ ಸ್ಥಾನ ನೀಡದೆ ಇದ್ದರೆ ಸಹಜವಾಗಿ ನಮ್ಮ ಸಮುದಾಯಕ್ಕೆ ಬೇಜಾರಾಗುತ್ತಿತ್ತು. ಹೀಗಾಗಿ ನನಗೆ ಸಚಿವ ಸ್ಥಾನ ನೀಡಲಾಗಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದರು.