ಮುಖ್ಯಮಂತ್ರಿ ಸಿದ್ದರಾಮಯ್ಯ  
ಮೈಸೂರು

‘ಪೂರ್ಣಾವಧಿ ಮುಖ್ಯಮಂತ್ರಿ’ಯಾಗುವ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಮೈಸೂರು: ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದ್ದು, ‘ಪೂರ್ಣಾವಧಿ ಮುಖ್ಯಮಂತ್ರಿ’ಯಾಗುವ ವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿ ಮುಂದುವರೆಯುವ ವಿಚಾರ ವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂಪುಟ ಪುನರ್ ರಚನೆಯ ಬಗ್ಗೆ ದೆಹಲಿಯಿಂದ ಕರೆ ಬಂದಾಗ ಮಾತನಾಡುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯದಲ್ಲಿ ದೀರ್ಘಾವಧಿವರೆಗೆ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ ವಿಚಾರ ನನಗೆ ತಿಳಿದಿರಲಿಲ್ಲ. ದಾಖಲೆ ಮುರಿಯಬೇಕು ಎಂಬ ವಿಚಾರ ನನ್ನ ಗಮನದಲ್ಲಿ ಇರಲಿಲ್ಲ. ಆದರೆ, ಜನರ ಆಶೀರ್ವಾದದಿಂದ ಎಲ್ಲವೂ ಸಾಧ್ಯವಾಗಿದೆ. ಇಂದು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ ಎಂದು ಹೇಳಿದರು.
ದೇವರಾಜ ಅರಸು ರಾಜಕಾರಣದ ಸಮಯವೇ ಬೇರೆ, ಇವತ್ತಿನ ಸಮಯವೇ ಬೇರೆ. ಜನರ ಆಶೀರ್ವಾದದಿಂದ ಅಷ್ಟೇ ನಾನು ಇಲ್ಲಿಯ ತನಕ ಬಂದಿದ್ದೇನೆ. ಇಲ್ಲಿಯವರೆಗಿನ ರಾಜಕೀಯ ತೃಪ್ತಿ ಕೊಟ್ಟಿದೆ. ಜನರಿಗೋಸ್ಕರ ಮತ್ತಷ್ಟು ಕೆಲಸ ಮಾಡಬೇಕಿದೆ. ನಾನು ಒಂದು ಬಾರಿ ಶಾಸಕನಾದರೆ ಸಾಕು ಅಂದುಕೊಂಡಿದ್ದೆ. ಆದರೆ, ಎಂಎಲ್ಎ, ಡಿಸಿಎಂ, ಸಿಎಂ ಆಗಿದ್ದೇನೆ ಎಂದರು.
ಮುಖ್ಯಮಂತ್ರಿಗಳ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿರುವ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಮಾನಿಗಳು ನಾಟಿಕೋಳಿ ಪಲಾವ್ ಹಂಚಿರುವ ಕುರಿತು ಮಾಹಿತಿ ಇಲ್ಲ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ರಾಗಿ ಮುದ್ದೆ ತಿನ್ನುತ್ತೇನೆ. ಇದು ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಇದಕ್ಕೆ ಹೆಚ್ಚು ಪ್ರಚಾರ ದೊರೆತ್ತಿದೆ ಎಂದು ಹೇಳಿದರು.