ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶ್ರೀ ಶಿವರಾತ್ರಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು.
- ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಬಣ್ಣನೆ
ನಂಜನಗೂಡು: ಸುತ್ತೂರು ಶ್ರೀಗಳು ಸಾಮಾಜಿಕ ಸೇವೆ ಜತೆಗೆ ಕೃಷಿ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡುವ ಮೂಲಕ ರೈತರು ಸದೃಢರಾಗಬೇಕು ಎಂಬ ಮಹಾದಾಸೆ ಹೊಂದಿದ್ದಾರೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಬಣ್ಣಿಸಿದರು.
ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶ್ರೀ ಶಿವರಾತ್ರಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಷಕ್ಕಿಂತ ವರ್ಷ ಜಾತ್ರೆ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಆಧ್ಯಾತ್ಮಿಕ ಹಾಗೂ ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಆಸಕ್ತಿ ವಹಿಸಿದ್ದಾರೆ. ಮೈಸೂರು ಭಾಗದಲ್ಲಿ ಶಿಕ್ಷಣದ ಜತೆಗೆ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡಿದ್ದಾರೆ. ಕೃಷಿಕರಿಗೆ ಕೆವಿಕೆ ಸ್ಥಾಪನೆ ಮಾಡಿ ಆಧುನಿಕ, ಸಾವಯವ, ಹೊಸ ಟೆಕ್ನಾಲಜಿ ತಂದಿದ್ದಾರೆ. ರಾಜ್ಯ ಸರ್ಕಾರ 1,500 ಕೋಟಿ ರೂ. ವೆಚ್ಚದಲ್ಲಿ ರೈತರ ಬೆಳೆಗಳಿಗೆ ಪರಿಹಾರವನ್ನು ನೀಡಿದ್ದೇವೆ. 27 ಲಕ್ಷ ರೈತರು ಹೊಸದಾಗಿ ವಿಮೆ ಮಾಡಿಸಿದ್ದಾರೆ. ಇದರಿಂದ ಹವಾಮಾನ ವೈಪರಿತ್ಯ ದಿಂದ ನಷ್ಟ ತಪ್ಪಿಸಬಹುದಾಗಿದೆ. ಇಡೀ ದೇಶದಲ್ಲಿ ಕೇಂದ್ರ ಸರ್ಕಾರ ಎರಡನೇ ಪ್ರಶಸ್ತಿಯನ್ನು ನೀಡಿದೆ. ನಾನು ಮಂತ್ರಿ ಆಗುವ ಮುನ್ನ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಕೃಷಿ ಹೊಂಡ 224 ತಾಲೂಕುಗಳಿಗೂ ವಿಸ್ತರಣೆ ಮಾಡಿದ್ದೇನೆ. ಜತೆಗೆ ಎಲ್ಲ ವರ್ಗದ ಜನರಿಗೂ 90 ಪ್ರತಿಶತ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಸಬ್ಸಿಡಿ ನೀಡಲಾಗಿದೆ ಎಂದರು.
ಚಾಮರಾಜ ಕ್ಷೇತ್ರದ ಶಾಸಕ ಹರೀಶ್‌ಗೌಡ ಮಾತನಾಡಿ, ಸುತ್ತೂರು ಜಾತ್ರೆ ವಿಜೃಂಭಣೆಯ ಜತೆಗೆ ವೈವಿಧ್ಯವನ್ನು ಕಾಣಬಹುದು. ಮೈಸೂರಿನ ಹೆಮ್ಮೆಯ ಜಾತ್ರೆ. ಜಾತ್ರೆ ನೋಡಲು ನಾನು ಚಿಕ್ಕವನಿದ್ದಾಗ ತಂದೆಯೊಂದಿಗೆ ಬರುತ್ತಿದ್ದೆ ಎಂದ ಅವರು, ಶ್ರೀಗಳು ಎಲ್ಲ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಹಾವೇರಿಯ ಪ್ರಗತಿಪರ ರೈತ ಮಹಿಳೆ ರಾಜೇಶ್ವರಿ ವಿ.ಪಾಟೀಲ್ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರವು ಹೆಚ್ಚಿದೆ. ಇಂದಿನ ಮಹಿಳೆಯರು ಪ್ರಜ್ಞಾವಂತರಾಗಬೇಕು. ಜತೆಗೆ ಸ್ವಾವಲಂಬಿ ಆಗಬೇಕು. ಮಹಿಳೆಯರು ಜಮೀನಿನಲ್ಲಿ ಉಳುಮೆ ಮಾಡುವ ಜತೆಗೆ ಮಾರುಕಟ್ಟೆಗಳಿಗೂ ತೆರಳುವ ಕಡೆ ಗಮನಹರಿಸಬೇಕು. ನೌಕರಿ ಸಿಗಲಿಲ್ಲ ಎಂದು ಪಟ್ಟಣಕ್ಕೆ ಹೋಗುವ ಮಹಿಳೆಯರು ಕೃಷಿ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸಾಯಿಪೀಠದ ಶ್ರೀ ಅರ್ಜುನ ಅವಧೂತ ಗುರೂಜಿ, ವಿಜಯಪುರ ವನಶ್ರೀ ಮಠದ ಶ್ರೀಬಸವಕುಮಾರ ಸ್ವಾಮಿಗಳು, ಕೇರಳ ಶ್ರೀ ಪಂಚ ದಾಸ ನಾಮ ಅವಹಾನ್ ಅಖಡದ ಶ್ರೀ ಸ್ವಾಮಿ ಪ್ರಭಾಕರಾನಂದ ಸರಸ್ವತಿ ಮಹಾರಾಜ್, ಮಾಜಿ ಶಾಶಕ ಹರ್ಷ ವರ್ಧನ್ ಸೇರಿದಂತೆ ಹಲವು ಗಣ್ಯರು ಇದ್ದರು.