ಮೈಸೂರು: ಜನತಾನಗರದಲ್ಲಿ ಶುಕ್ರವಾರ ನಿಗದಿತ ಕೆಲಸದ ನಂತರ ಉದ್ದಿಮೆ ಪರವಾನಗಿ ಬಗ್ಗೆ ಮಾಹಿತಿ ನೀಡುತ್ತಿದ್ದ ಪೌರ ಕಾರ್ಮಿಕರೊಬ್ಬರ ಮೇಲೆ ಅಂಗಡಿಯೊಂದರ ಮಾಲೀಕ ಹಲ್ಲೆ ನಡೆಸಿದ್ದಾನೆ.
ವಲಯ ಕಚೇರಿ 3ರ ವ್ಯಾಪ್ತಿಯ 44ನೇ ವಾರ್ಡ್‌ನಲ್ಲಿ ಓಓಡಿ ಮೇಸ್ತ್ರಿ(ಪೌರಕಾರ್ಮಿಕ)ಯಾಗಿ ಕಾರ್ಯ ನಿರ್ವಹಿಸುವ ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜನತಾನಗರ ಎಸ್‌ಸಿ ರಸ್ತೆಯ ಮೆಟ್ರೋ ಹೋಂ ಅಪ್ಲೇಯನ್ಸ್ ಮಾಲೀಕ ರಮ್‌ಜಾನ್ ಸಾಬ್ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಗದಿತ ಕಾರ್ಯದ ಬಳಿಕ ಬೆಳಗ್ಗೆ 11.55ರ ಸುಮಾರಿಗೆ ಅಂಗಡಿಗಳ ಬಳಿ ಹೋಗಿ ಉದ್ದಿಮೆ ಪರವಾನಗಿ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಹಾಗೆಯೇ ಮೆಟ್ರೋ ಹೋಂ ಅಪ್ಲೇಯನ್ಸ್ ಬಳಿ ಹೋಗಿ ಉದ್ದಿಮೆ ರಹದಾರಿ ಬಗ್ಗೆ ಮಾಹಿತಿ ಕೇಳಿದೆ. ಅಷ್ಟಕ್ಕೆ ಅಂಗಡಿ ಮಾಲೀಕ, ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು. ಪರಿಣಾಮ ಮೂಗು, ಬಾಯಿ, ತುಟಿಗೆ ಗಾಯವಾಗಿದೆ. ನಂತರ ಮತ್ತೆ ನನ್ನನ್ನು ಕೆಳಗೆ ಬೀಳಿಸಿ, ಕಾಲಿನಿಂದ ಒದ್ದು ಹಲ್ಲೆ ನಡೆಸಿದರು. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದರು ಎಂದು ವೆಂಕಟೇಶ್, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.